ನಾನು ನ್ಯಾಯಕ್ಕಾಗಿ ತಲೆಬಾಗುವೆನೇ ಹೊರತು ಮತ್ತಾವುದಕ್ಕೂ ತಲೆಬಾಗಲಾರೆ: ಸಿದ್ದರಾಮಯ್ಯ
ವಿಜಯನಗರ, ಫೆ.6: ಟೀಕೆಗಳಿಗೆ ಹೆದರುವ ಗಿರಾಕಿ ನಾನಲ್ಲ. ಯಾರಾದರೂ ಹೆದರಿಸುವ ಪ್ರಯತ್ನ ಮಾಡಿದರೆ ತೊಡೆ ತಟ್ಟುವುದು ನನಗೂ ಗೊತ್ತಿದೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ವಿಜಯ ನಗರದ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟಿಸಿ ಮಾತನಾಡಿದ ಅವರು, ‘ನಾನು ಕುರುಬ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ‘ಟಗರು’ ಎನ್ನುವುದಲ್ಲ, ನಾನು ರೂಪಿಸಿದ ಅನ್ನಭಾಗ್ಯ ಯೋಜನೆ ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಿ ಜಾರಿ ಮಾಡಿದ್ವಾ? ಎಲ್ಲ ಬಡವರಿಗೆ ನೀಡಿರಲಿಲ್ವಾ? ಕೃಷಿ ಭಾಗ್ಯ ಯೋಜನೆಯನ್ನು ಬರೀ ಕುರುಬ ಜಾತಿಯ ರೈತರಿಗೆ ಮಾತ್ರ ನೀಡಿದ್ದೆವಾ? ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ, ಶಾದಿ ಭಾಗ್ಯ, ಇವೆಲ್ಲ ಯೋಜನೆಗಳನ್ನು ಈ ನಾಡಿನಲ್ಲಿ ದುರ್ಬಲರಿಗೆ ಸಹಾಯವಾಗಲಿ ಎಂದು ಮಾಡಿದ್ದು ಎಂದು ಸ್ಪಷ್ಟಪಡಿಸಿದರು.
‘ನಾನು ನ್ಯಾಯಕ್ಕಾಗಿ ತಲೆಬಾಗುವೆನೇ ಹೊರತು ಮತ್ತಾವುದಕ್ಕೂ ತಲೆಬಾಗಲಾರೆ. ಅಧಿಕಾರ ಇದ್ದಾಗಲೂ ಮತ್ತು ಇಲ್ಲದಿದ್ದಾಗಲೂ ನಾನು ಸಾಮಾಜಿಕ ನ್ಯಾಯದ ಪರ ಹೋರಾಟ ಮಾಡಿದ್ದೇನೆ. ಮುಂದೆಯೂ ಹೋರಾಡುವೆ. ನಾನೆಂದೂ ಅಧಿಕಾರದ ಹಿಂದೆ ಬಿದ್ದಿಲ್ಲ. ನನಗೆ ನ್ಯಾಯಯುತವಾಗಿದೆ ಎಂದು ಅನಿಸಿದ್ದನ್ನು ಮಾಡುತ್ತೇನೆ ಎಂದು ಹೇಳಿದರು.
‘ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದು, ಸಂವಿಧಾನ ತಿದ್ದುಪಡಿಯನ್ನೇ ಮಾಡಿಲ್ಲ. ಮೂಗಿಗೆ ತುಪ್ಪ ಹಚ್ಚುವವರನ್ನು ನೋಡಿದ್ದೇವೆ. ಆದರೆ, ಹಣೆಗೆ ತುಪ್ಪ ಹಚ್ಚುವವರನ್ನು ನೋಡಿದ್ದು ಇದೇ ಮೊದಲು. ಮೇಲ್ಜಾತಿಯ ಬಡವರಿಗೆ ಯಾವುದೇ ಶಿಫಾರಸ್ಸು ಇಲ್ಲದೆ ಶೇ.10ರಷ್ಟು ಹೆಚ್ಚಳ ಮಾಡಿದ್ದು, ಸಂವಿಧಾನ ಬಾಹಿರ. ಇದರ ವಿರುದ್ದ ಧ್ವನಿಯೆತ್ತಬೇಕು’ ಎಂದರು ಹಾಗೂ ಸಿಎಂ ಬೊಮ್ಮಾಯಿ ನಿನ್ನೆ ಕುರುಬ ಸಮುದಾಯವನ್ನು ಎಸ್.ಟಿ.ಗೆ ಸೇರ್ಪಡೆ ಮಾಡುವ ಭರವಸೆ ನೀಡಿದ್ದಾರೆ. ಆ ಕೆಲಸ ಮಾಡಬೇಕಾಗಿರುವುದು ಕೇಂದ್ರ ಸರಕಾರ. ಇಲ್ಲಿ ನಿಂತು ಮೀಸೆ ತಿರುವಿ ಭಾಷಣ ಮಾಡಿದರೆ ಅರ್ಥವಿಲ್ಲ. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿ ಸಂವಿಧಾನ ತಿದ್ದುಪಡಿ ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.