ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ-6 ವಿವಿಧ ಯೋಜನೆಗಳಿಗೆ ಚಾಲನೆ

ಬೆಂಗಳೂರು/ತುಮಕೂರು, ಫೆ.6 : ವಿವಿಧ 6 ಪ್ರಮುಖ ಯೋಜನೆಗಳಿಗೆ ಚಾಲನೆ ನೀಡುವ ಸಲುವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಿದ್ದಾರೆ.

ರಾಜ್ಯ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಮುಖಂಡರು ಸ್ವಾಗತಿಸಿದರು. ಬಳಿಕ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೊದಲು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಬೆಳಿಗ್ಗೆ 11.20ಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಆಯೋಜಿಸಿರುವ ಭಾರತ ಇಂಧನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಗೂ ಅದೇ ವೇದಿಕೆಯಲ್ಲಿಯೇ ಪೆಟ್ರೋಲ್’ಗೆ ಶೇ.20ರಷ್ಟು ಎತನಾಲ್ ಮಿಶ್ರಣ ಮಾಡಿ ಸಿದ್ಧಪಡಿಸಲಾಗಿರುವ ಇ20 ಪೆಟ್ರೋಲ್ ನ್ನು ದೇಶದ ವಿವಿಧ ರಾಜ್ಯಗಳ 67 ಪೆಟ್ರೋಲ್ ಬಂಕ್ ಗಳಲ್ಲಿ ಪ್ರಾಯೋಗಿಕವಾಗಿ ವಿತರಣೆಗೆ ಚಾಲನೆ ನೀಡಲಿದ್ದಾರೆ. ಜೊತೆಗೆ ಒಮ್ಮೆ ಬಳಸಿ ಬಿಸಾಡುವ ಹಳೆಯ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯದಿಂದ ತಯಾರಿಸಿದ ಸಮವಸ್ತ್ರ ಅನಾವರಣ ಮಾಡಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕವೇ ತುಮಕೂರಿಗೆ ತೆರಳಲಿದ್ದಾರೆ.

ನಂತರ ತುಮಕೂರು ಭೇಟಿ ಬಳಿಕ ಜಿಲ್ಲೆಯ ಗುಬ್ಬಿ ತಾಲೂಕು ನಿಟ್ಟೂರು ಬಳಿಯ ಬಿದರೆಹಳ್ಳ ಕಾವಲ್ ನಲ್ಲಿ ಹೆಚ್.ಎ.ಎಲ್’ನ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇಂದು ಮಧ್ಯಾಹ್ನ 3.30ಕ್ಕೆ ಹೆಚ್.ಎ.ಎಲ್ ಹೆಲಿಪ್ಯಾಡ್’ಗೆ ಮೋದಿ ಬಂದಿಳಿಯಲಿದ್ದಾರೆ. ಹೆಲಿಕಾಪ್ಟರ್ ಬಳಿಯೇ ಇರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಲೋಕಾರ್ಪಣೆ ಮಾಡಲಿದ್ದಾರೆ. ಅದರ ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ಲೋಕಾರ್ಪಣೆ ಕೂಡ ನಡೆಯಲಿದೆ. ಬಳೀಕ 4.30ಕ್ಕೆ ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

ಕಾರ್ಯಕ್ರಮ ಸಲುವಾಗಿ 80-90 ಸಾವಿರ ಜನರು ಸೇರುವ ಸಾಧ್ಯತೆ ಇದ್ದು, ಸುಮಾರು 3 ಸಾವಿರ ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬಾರಿ ಬಂದೋಬಸ್ತ್ ಮಾಡಲಾಗಿದ್ದು, ತುಮಕೂರು ಎಸ್.ಪಿ ರಾಹುಲ್ ಕುಮಾರ್ ಸೇರಿದಂತೆ ಒಟ್ಟು 5 ಜನ ಎಸ್.ಪಿಗಳ ನೇತೃತ್ವದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವವರು ಮಧ್ಯಾಹ್ನ 1 ಗಂಟೆಯಿಂದ 2.30ರ ಒಳಗೆ ಕಾರ್ಯಕರ್ತರು ವೇದಿಕೆ ಮುಂಭಾಗ ಆಸೀನರಾಗಬೇಕಿದೆ. ಭದ್ರತಾ ದೃಷ್ಟಿಯಿಂದ ನೀರಿನ ಬಾಟಲ್, ಪ್ಲಾಸ್ಟಿಕ್ ಪೇಪರ್, ಊಟದ ಬಾಕ್ಸ್, ಇತರೆ ವಸ್ತುಗಳನ್ನ ಸಂಪೂರ್ಣ ನಿಷೇಧ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಗ್ರೀನ್ಫೀಲ್ಡ್ ಹೆಲಿಕಾಪ್ಟರ್ ಕಾರ್ಖಾನೆಯು 615 ಎಕರೆ ಪ್ರದೇಶದಲ್ಲಿದೆ. ದೇಶದ ಎಲ್ಲಾ ಹೆಲಿಕಾಪ್ಟರ್ ಅವಶ್ಯಕತೆಗಳಿಗೆ ಒಂದೇ ಕಡೆ (ಒನ್ ಸ್ಟಾಪ್) ಪರಿಹಾರ ಒದಗಿಸುವ ದೃಷ್ಟಿಕೋನದಲ್ಲಿ ಯೋಜಿಸಲಾಗಿದೆ. ಇದು ಭಾರತದ ಅತಿದೊಡ್ಡ ಹೆಲಿಕಾಪ್ಟರ್ ತಯಾರಿಕಾ ಘಟಕವಾಗಿದೆ. ಈ ಕಾರ್ಖಾನೆಯ ಅಡಿಪಾಯವನ್ನು 2016ರಲ್ಲಿ ಪ್ರಧಾನಮಂತ್ರಿಯವರು ಹಾಕಿದ್ದರು. ಈ ಕಾರ್ಖಾನೆಯು ಭಾರತವು ತನ್ನ ಸಂಪೂರ್ಣ ಹೆಲಿಕಾಪ್ಟರ್ ಅಗತ್ಯತೆಗಳನ್ನು ಆಮದು ಮಾಡಿಕೊಳ್ಳದೆಯೇ ಪೂರೈಸಲು ಅನುವು ಮಾಡಿಕೊಡುತ್ತದೆ ಮತ್ತು ಹೆಲಿಕಾಪ್ಟರ್ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಒತ್ತು ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!