ಬಿಜೆಪಿ ಅಧಿಕಾರಕ್ಕೇರಿದರೆ ಮುಸ್ಲಿಮರಿಗಿಂತ ಹಿಂದೂಗಳಿಗೆ ಹೆಚ್ಚು ಅಪಾಯ-ಸಸಿಕಾಂತ್ ಸೆಂಥಿಲ್
ಬೆಂಗಳೂರು, ಫೆ.5 : ಬಿಜೆಪಿ ಮತ್ತೆ ಅಧಿಕಾರಕ್ಕೇರಿದರೆ ಮುಸ್ಲಿಮರಲ್ಲ. ಹಿಂದೂಗಳೆ ಅತಿ ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಾರೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ತಿಳಿಸಿದ್ದಾರೆ.
‘ನಮ್ಮ ಧ್ವನಿ ಬಳಗ’ ದ ವತಿಯಿಂದ ನಗರದ ಗಾಂಧಿಭವನ ಸಭಾಂಗಣದಲ್ಲಿ ಸಾಮಾಜಿಕ ಹೋರಾಟಗಾರ ಮಹೇಂದ್ರ ಕುಮಾರ್ ಅವರ ನೆನಪಿನಲ್ಲಿ ಆಯೋಜಿಸಿದ್ದ ಪ್ರಬುದ್ಧ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತೆ ಅಧಿಕಾರಕ್ಕೇರಿದರೆ ಮುಸ್ಲಿಮರಲ್ಲ. ಹಿಂದೂಗಳೆ ಅತಿ ಹೆಚ್ಚು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ಅದರಲ್ಲೂ ದಲಿತರು, ಹಿಂದುಳಿದ ವರ್ಗದವರು ತಮ್ಮ ಅಸ್ತಿತ್ವವೇ ಇಲ್ಲದಂತೆ ಕಳೆದುಹೋಗುತ್ತಾರೆ. ಮತ್ತೊಮ್ಮೆ ಅಸಮಾನತೆ, ಜಾತಿ ಪದ್ಧತಿ ಸೃಷ್ಟಿಸಲು ಅವರು ಕನಸನ್ನು ಕಂಡಿದ್ದು, ಅದಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ ಎಂದು ಅವರು ಹೇಳಿದರು.
ದೇಶದಲ್ಲಿರುವ ಶೇ.20ರಷ್ಟು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಅಪಪ್ರಚಾರ, ಸುಳ್ಳು ಸುದ್ದಿಗಳನ್ನು 80ರಷ್ಟಿರುವ ಇತರೆ ಸಮುದಾಯದ ಮೇಲೆ ಹೇರಿ, ಭಯ ಸೃಷ್ಟಿಸುತ್ತಾರೆ. ಆನಂತರ, ಚುನಾವಣೆ ಸಂದರ್ಭದಲ್ಲಿ ಈ ಭಯವನ್ನೆ ಪ್ರಸ್ತಾಪಿಸಿ ಮತಗಳಾಗಿ ಪರಿವರ್ತನೆ ಮಾಡುವ ಕಲೆಯನ್ನೆ ಬಲಪಂಥೀಯರು ರೂಢಿಸಿಕೊಂಡಿದ್ದಾರೆ. ಈ ಹಿಂದೆಯೂ ಇದೇ ಈ ರೀತಿಯ ಮಾದರಿ ಜಾರಿಮಾಡುವಲ್ಲಿ ಸಾರ್ವಧಿಕಾರಿ ಅಡೋಲ್ಪ್ ಹಿಟ್ಲರ್ ಸಹ ಯಶಸ್ವಿ ಆಗಿದ್ದ ಎಂದು ಹೇಳಿದರು.
ಭಾರತದ ಜನರು ಎಂದಿಗೂ ಕೋಮುವಾದಿಗಳಲ್ಲ. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಇಡೀ ಪ್ರಪಂಚದಲ್ಲಿಯೇ ವೈವಿಧ್ಯತೆ ಇದ್ದರೂ ಏಕತೆಯಿಂದ ಬದುಕುತ್ತಿರುವ ಏಕೈಕ ರಾಷ್ಟ್ರ. ಆದರೆ, ಕೋಮುವಾದಿ ಚಿಂತನೆಯಿಂದ ಬಂದಿರುವವರು ದೇಶದಲ್ಲಿ ತಾರತಮ್ಯ ಪೋಷಿಸುತ್ತಿದ್ದಾರೆ. ಎಲ್ಲರೂ ಒಂದೇ ವಿಚಾರವನ್ನು ಒಪ್ಪಿಕೊಳ್ಳಬೇಕು ಎಂದು ಜನರ ಮೇಲೆ ಕಾನೂನು ಹೇರುವ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಿದರು.
ಹಿಂದೂಗಳ ಪರವೋ, ಮುಸ್ಲಿಮರ ಪರವೋ ಎನ್ನುವ ಒಂದೇ ಪ್ರಶ್ನೆ ಅವರಲ್ಲಿದೆ. ನೀವು ಸಂವಿಧಾನದ ಪರವೋ, ವಿರುದ್ಧವೋ ಎನ್ನುವ ಪ್ರಶ್ನೆ ಅವರನ್ನು ಕೇಳಿ. ಸಂವಿಧಾನ ಒಪ್ಪಿಕೊಳ್ಳದವರನ್ನು ಅಧಿಕಾರದಲ್ಲಿ ಮುಂದುವರಿಯಲು ಬಿಡಬಾರದು. ವೈವಿಧ್ಯತೆಯೊಂದಿಗೆ ದೇಶ ಹೇಗೆ ಅಭಿವೃದ್ಧಿ ಮಾಡಬೇಕು ಎನ್ನುವ ಸಂಗತಿ ಸಂವಿಧಾನದಲ್ಲಿದೆ. ಸಂವಿಧಾನ ಸಮರ್ಪಕ ಜಾರಿಗೊಳಿಸಿದರೆ ತನ್ನಷ್ಟಕ್ಕೆ ಅಭಿವೃದ್ಧಿಯಾಗುತ್ತದೆ. ಆದರೆ, ಕೋಮುವಾದಿಗಳಿಗೆ ಅದು ಬೇಕಾಗಿಲ್ಲ ಎಂದು ನುಡಿದರು.
ಈ ಸಂದರ್ಭದಲ್ಲಿ ಚಿಂತಕ ಎಲ್.ಎನ್.ಮುಕುಂದರಾಜ್, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಹೋರಾಟಗಾರರಾದ ಮಾವಳ್ಳಿ ಶಂಕರ್, ಮುನೀರ್ ಕಟಿಪಳ್ಳ, ನವೀನ್ ಕರುವಾನೆ, ಕಾಂಗ್ರೆಸ್ ನಾಯಕ ನಿಕೇತ್ ರಾಜ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.