ಕುಂದಾಪುರದ ನೂತನ ಸಹಾಯಕ ಆಯುಕ್ತರಾಗಿ ರಶ್ಮಿ ಎಸ್. ಆರ್ ಅಧಿಕಾರ ಸ್ವೀಕಾರ

ಕುಂದಾಪುರ ಫೆ.3 : ಕುಂದಾಪುರ ಸಹಾಯಕ ಆಯುಕ್ತರಾಗಿ (ಅಸಿಸ್ಟೆಂಟ್ ಕಮಿಷನರ್) ರಶ್ಮಿ ಎಸ್.ಆರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ನೂತನ ಎಸಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕುಂದಾಪುರದ ಮಿನಿವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಇದು ಜಿಲ್ಲೆಯಲ್ಲಿ ಕೆಲಸ ಮಾಡುವ ಎರಡನೇ ಸ್ಥಳವಾಗಿದೆ. ಕುಂದಾಪುರ ಕನ್ನಡ ಕೇಳಿ ಅರಿವಿದೆ. ಈ ಹಿಂದಿದ್ದ ಇಲಾಖೆಯಲ್ಲಿ ಕುಂದಾಪುರ ಕನ್ನಡದವರ ಒಡನಾಟವಿತ್ತು. ಊರು ಹೊಸದು ಆದರೆ ಆಡಳಿತ ಎಲ್ಲಾ ಕಡೆ ಒಂದೇ ರೀತಿಯಾಗಿರುತ್ತದೆ. ಉಪವಿಭಾಗ ವ್ಯಾಪ್ತಿಯಲ್ಲಿ ಅಕ್ರಮ ಮರಳು, ಗಣಿಗಾರಿಕೆ ಬಗ್ಗೆ ಮಾಧ್ಯಮದವರು ಗಮನಕ್ಕೆ ತಂದಾಗ ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು.

ನೂತನ ಎಸಿ ಅವರಿಗೆ ಇಲಾಖೆಯ ಸಿಬ್ಬಂದಿಗಳು ಸ್ವಾಗತಿಸಿದರು. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಭೇಟಿ ನೀಡಿ ಶುಭಕೋರಿದರು.

ಕಳೆದ ಮೂರು ವರ್ಷಗಳಿಂದ ಕುಂದಾಪುರ ಎಸಿಯಾಗಿದ್ದ ಕೆ. ರಾಜು ಅವರು ಮಂಗಳೂರು ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

2014ನೇ ಬ್ಯಾಚ್ ನ ಕೆ.ಎ.ಎಸ್ ಅಧಿಕಾರಿಯಾಗಿರುವ ರಶ್ಮಿ ಎಸ್. ಆರ್ ಮೂಲತಃ ಮಂಗಳೂರಿನವರು. ಅವರು 2017ರಲ್ಲಿ ಸೇವೆಗೆ ಸೇರಿದ್ದು ದ.ಕ ಜಿಲ್ಲೆಯಲ್ಲಿ ಪ್ರೊಬೇಷನರ್ ಅವಧಿ ಮುಗಿಸಿ 2019ರಲ್ಲಿ ಬಂಟ್ವಾಳ ತಹಶೀಲ್ದಾರ್ ಆಗಿದ್ದರು. ಲೋಕಸಭಾ ಹಾಗೂ ಗ್ರಾ.ಪಂ ಚುನಾವಣೆ ಸಮಯದಲ್ಲಿ ಕಾಪು ತಹಶೀಲ್ದಾರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಬಳಿಕ ಬಂಟ್ವಾಳಕ್ಕೆ ವಾಪಾಸ್ಸಾಗಿದ್ದು 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಪದೋನ್ನತಿ ಹೊಂದಿದ್ದರು. ಪ್ರಸ್ತುತ ಕುಂದಾಪುರ ಉಪವಿಭಾಗಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!