“ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ” ಎಂಬ ಪುಸ್ತಕ ಪುತ್ತಿಗೆ ಶ್ರೀ ಕೈಯಲ್ಲಿ: ವಿವಾದ ಸೃಷ್ಟಿಸಿದೆ 10 ವರ್ಷಗಳ ಹಿಂದಿನ ಫೋಟೋ

ಉಡುಪಿ ಫೆ.2 : ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು “ಇಸ್ಲಾಂ ಭಯೋತ್ಪಾದನೆಯ ಧರ್ಮವಲ್ಲ” ಎಂಬ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿರುವ 10 ವರ್ಷದ ಹಿಂದಿನ ಫೋಟೊವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇದೀಗ ವಿವಾದದ ಕಿಡಿಯನ್ನು ಹೊತ್ತಿಸಿದೆ.

ಇದೀಗ ಈ ವೈರಲ್ ಫೋಟೋ ವಿಚಾರವಾಗಿ ಹಿಂದು ಪರ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಬಗ್ಗೆ ಪುತ್ತಿಗೆ ಮಠ ಸ್ಪಷ್ಟಣೆ ನೀಡಿದ್ದು, ಇದು ಹತ್ತು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮವಾಗಿದೆ. ಸಮಾಜದಲ್ಲಿ ಒಡಕು ಉಂಟು ಮಾಡಲು ಕೆಲವರು ಈ ರೀತಿ ವೈರಲ್ ಮಾಡುತ್ತಿದ್ದಾರೆ. ಜನಾಂಗಗಳ ನಡುವೆ ಪರಸ್ಪರ ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಸಾಧು- ಸಂತರು, ಪೀಠಾಧಿಪತಿಗಳು ಶಾಂತಿ-ಸೌಹಾರ್ದತೆಗೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ. ಸನಾತನ ಧರ್ಮದ ಮೊದಲ ಆದ್ಯತೆ ಕೂಡ ಶಾಂತಿ-ಸೌಹಾರ್ದತೆಯೇ ಆಗಿದೆ. ಅದ್ವೈತ ಆಚಾರ್ಯರೊಬ್ಬರು ಹಿಂದಿಯಲ್ಲಿ ಬರೆದ ಪುಸ್ತಕದ ಕನ್ನಡ ಅನುವಾದ ಇದಾಗಿತ್ತು. “ಇಸ್ಲಾಂ ಆತಂಕ್ ಯಾ ಆದರ್ಶ್” ಪುಸ್ತಕದ ಕನ್ನಡ ಅನುವಾದ ಇದಾಗಿದ್ದು, ಶ್ರೀಗಳು ಅಂದು ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದರು ಎಂದು ಹೇಳಿದೆ.

ಹಾಗೂ ಪುತ್ತಿಗೆ ಶ್ರೀಗಳು ಮೊದಲಿನಿಂದಲೂ ಭಯೋತ್ಪಾದನೆಯನ್ನು ತೀಕ್ಷವಾಗಿ ಖಂಡಿಸುತ್ತಾ ಬಂದಿದ್ದಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ “ರಿಲಿಜನ್ ಫಾರ್ ಪೀಸ್’ನ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇಸ್ಲಾಂ ದೇಶ ಸಹಿತ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಭಯೋತ್ಪಾದನೆಯ ವಿರುದ್ಧ ಅಭಿಪ್ರಾಯವನ್ನು ರೂಪಿಸಿದ್ದಾರೆ. ಅಮೆರಿಕದ ಶ್ವೇತ ಭವನದಲ್ಲೂ ಭಯೋತ್ಪಾದನೆಯ ವಿರುದ್ಧ ಮಾತನಾಡಿದ್ದಾರೆ. ಜೀವ ಬೆದರಿಕೆಗಳನ್ನು ಲೆಕ್ಕಿಸದೆ ಈ ಕೆಲಸ ಮಾಡುತ್ತಾ ಬಂದಿದ್ದಾರೆ. ಶ್ರೀಗಳ ವಿಶ್ವತೋಮುಖ ವ್ಯಕ್ತಿತ್ವ ಅರಿಯದೆ ಕೆಲವು ವಿಕೃತ ಮನಸ್ಸಿನವರು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಶ್ರೀಗಳ ಆಪ್ತ ಹೆಜಮಾಡಿ ಸುದೀಂದ್ರ ಆಚಾರ್ಯ ಅವರು ಹೇಳಿದ್ದಾರೆ.

ಈ ಫೋಟೊ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಹಿಂದು ಮುಖಂಡ ಬಾಲಾಜಿ ರಾಘವೇಂದ್ರ ಆಚಾರ್ಯ ಅವರು ವೀಡಿಯೋ ಮೂಲಕ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದು, ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಈ ಪುಸ್ತಕ ಬಿಡುಗಡೆ ಮಾಡಿರುವುದು ನಮಗೆ ಆಘಾತವನ್ನು ತಂದಿದೆ. ಇಸ್ಲಾಂನವರು ಅಲ್ಲಾಹು ಮಾತ್ರ ದೇವರು, ಉಳಿದವರು ಕಾಫೀರರು ಎಂದು ಹೇಳುತ್ತಾರೆ. ಕಾಫೀರರ ವಿರುದ್ಧ ಜಿಹಾದ್ ಮಾಡಬೇಕು. ಕೊಲ್ಲಬೇಕು ಎಂದು ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಶ್ರೀಪಾದರು ಈ ಪುಸ್ತಕವನ್ನು ಹೇಗೆ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹಾಗೂ ಅಂತಾರಾಷ್ಟ್ರೀಯವಾಗಿ ಜಿಹಾದಿ ಭಯೋತ್ಪಾದನೆಯಿಂದ ಪ್ರಪಂಚವು ತತ್ತರಿಸಿದೆ. ಹಿಂದು ಸಮಾಜ ಸ್ವಾಭಿಮಾನಿ ಆಗಬೇಕು. ಸ್ವಾಮೀಜಿಗಳನ್ನು ಕೂಡಾ ಪ್ರಶ್ನೆ ಮಾಡುವ ಮನೋಭಾವ ಬೆಳೆದಿದೆ ಎಂದು ಹೇಳಿದ್ದಾರೆ.

ಇನ್ನು ಈ ವೈರಲ್ ಫೋಟೋ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು, ” ಅಷ್ಟ ಮಠಾಧೀಶರಲ್ಲೊಬ್ಬರಾಗಿರುವ ಪುತ್ತಿಗೆ ಸುಗುಣೇಂದ್ರ ತೀರ್ಥರು ಇಸ್ಲಾಂ ಕುರಿತಾದ ಪುಸ್ತಕವನ್ನು ಬಿಡುಗಡೆ ಮಾಡಿರುವುದನ್ನು ನಾನು ಖಂಡಿಸುತ್ತಿದ್ದೇನೆ. ಸ್ವಾಮೀಜಿಗಳ ಬಗ್ಗೆ ನನಗೆ ಬಹಳ ಗೌರವವಿದೆ. ಆದರೆ, ಇಂದು ಇಸ್ಲಾಂ ಇಡೀ ಜಗತ್ತಿನಲ್ಲಿ ಯಾವ ರೀತಿ ನಡೆದುಕೊಳ್ಳುತ್ತಿದೆ. ನಮ್ಮ ಎಷ್ಟೋ ಹಿಂದು ಭಾಗಗಳನ್ನು ಕಳೆದುಕೊಂಡಿದ್ದೇವೆ ಎನ್ನುವುದು ನಿಮ್ಮ ಗಮನದಲ್ಲಿದೆ ಆದರೂ ಇಂಥ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಇರಾನ್, ಇರಾಕ್, ಈಜಿಪ್ಟ್, ಇಂಡೋನೇಷ್ಯಾ ಹೀಗೆ 50 ರಿಂದ 60 ಪ್ರದೇಶಗಳನ್ನು ಕಳೆದುಕೊಳ್ಳಲಾಗಿದೆ. ಇಲ್ಲೆಲ್ಲ ಸಂಪೂರ್ಣವಾಗಿ ಇಸ್ಲಾಮಿಕರಣವಾಗಿದೆ. 75 ವರ್ಷಗಳಲ್ಲಿ ನಮ್ಮ ದೇಶದಲ್ಲಿ ಏನಾಗಿದೆ ಎಂಬುದು ಸಹ ತಮ್ಮ ಗಮನದಲ್ಲಿದೆ. ಅಲ್ಲದೆ, ಪಶ್ಚಿಮ ಬಂಗಾಳದ ಒಂಬತ್ತು ಜಿಲ್ಲೆಗಳನ್ನು ಬಾಂಗ್ಲಾದೇಶಿ ಮುಸ್ಲಿಂರು ಕಬಳಿಸಿ ಕುಳಿತುಕೊಂಡಿದ್ದಾರೆ. ಅಲ್ಲಿ ದುರ್ಗಾ ಪೂಜೆ ಮಾಡುವ ಹಾಗಿಲ್ಲ, ಗಂಟೆ ಬಾರಿಸುವ ಹಾಗಿಲ್ಲ, ಅಗರಬತ್ತಿ ಹಚ್ಚುವ ಹಾಗಿಲ್ಲ, ಮಂತ್ರವನ್ನೂ ಹೇಳುವ ಹಾಗಿಲ್ಲ. ಕೇರಳದಲ್ಲಿ ಶೇಕಡಾ 40ರಷ್ಟು ಮಾತ್ರ ಹಿಂದುಗಳು ಉಳಿದುಕೊಂಡಿದ್ದಾರೆ. ಭಯೋತ್ಪಾದನೆಂದರೆ ಬಾಂಬು ಹಾಕುವುದು ಬಂದೂಕು ಹಿಡಿದು ಮಾಡುವಂತದ್ದು ಮಾತ್ರವಲ್ಲ, ಭಯೋತ್ಪಾದನೆ ಎಂದರೆ ಇಸ್ಲಾಮಿಕರಣ. ಇನ್ನೊಂದು ಧರ್ಮವನ್ನು ನುಂಗಿ ನೀರು ಕುಡಿಯುವ ಇಸ್ಲಾಮಿಕರಣವೂ ಒಂದು ಭಯೋತ್ಪಾದನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಗೂ ಈ ಪುಸ್ತಕವನ್ನು ಬಿಡುಗಡೆ ಮಾಡಿರುವ ಪುತ್ತಿಗೆ ಶ್ರೀಗಳು ಕ್ಷಮೆ ಕೇಳಬೇಕು. ಇಲ್ಲವಾದರೆ ನಿಮ್ಮ ವಿರುದ್ಧವೂ ಪ್ರತಿಭಟನೆ ಮಾಡಬೇಕಾಗುತ್ತದೆ. ಇಸ್ಲಾಂ ತುಷ್ಟಿಕರಣ ಮಾಡಿದರೆ ನಾಳೆ ನಿಮ್ಮ ಮಠವೂ ಉಳಿಯುವುದಿಲ್ಲ ಎಂಬುದನ್ನು ನಾನು ನೆನಪಿಸುತ್ತೇನೆ. ಹಿಂದು ಧರ್ಮದ ಪ್ರತಿಪಾದಕರಾದ ನೀವು ಇಸ್ಲಾಂ ಭಯೋತ್ಪಾದಕ ಧರ್ಮ ಅಲ್ಲ ಎನ್ನುವಂತಹ ಪುಸ್ತಕವನ್ನು ಬಿಡುಗಡೆ ಮಾಡುವಂತಹ ಅಗತ್ಯತೆ ಏನಿತ್ತು? ಭಗವದ್ಗೀತೆ ಕುರಿತು ನೀವು ಮಾಡಿದಂತಹ ಅಭಿಯಾನ ಇಂದಿಗೂ ನಮಗೆ ನೆನಪಿದೆ. ಮಸೀದಿಯನ್ನು ಉದ್ಘಾಟಿಸುವಂತಹ ಪ್ರವೃತ್ತಿಯಿಂದಲೇ ಇಸ್ಲಾಂ ಬೆಳೆಯುತ್ತಿದೆ, ಹಿಂದೂ ಧರ್ಮ ನಾಶವಾಗುತ್ತಿದೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *

error: Content is protected !!