ಪ್ರಚೋದನಕಾರಿ ಭಾಷಣ: ಶರಣ್ ಪಂಪ್ ವೆಲ್ ವಿರುದ್ಧ ಎಫ್‍ಐಆರ್
ತುಮಕೂರು, ಫೆ.2 : ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದ ಮೇಲೆ ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಶೌರ್ಯಯಾತ್ರೆಯಲ್ಲಿ ಶರಣ್ ಪಂಪ್‍ವೆಲ್ ಅವರು ಶಾಂತಿ ಭಂಗ ಮಾಡುವಂತಹ ದ್ವೇಷ ಭಾಷಣ ಮಾಡಿದ್ದಾರೆ ಎಂದು ನಗರದ ಬಾರ್ ಲೈನ್ ನಿವಾಸಿಯಾಗಿರುವ ಸೈಯದ್ ಬುರ್ಹಾನ್ ಉದ್ದೀನ್ ಅವರು ನೀಡಿದ ದೂರಿನ ಮೇರೆಗೆ ತಿಲಕ್ ಪಾರ್ಕ್ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ತುಮಕೂರಿನಲ್ಲಿ ಇತ್ತೀಚೆಗೆ ನಡೆದ ಶೌರ್ಯಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಶರಣ್ ಪಂಪ್ ವೆಲ್,ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯ ಪ್ರತೀಕಾರಕ್ಕಾಗಿಯೇ ಫಾಜಿಲ್ ಹತ್ಯೆಯಾಗಿದೆ. ಜಿಲ್ಲೆಯನ್ನು ಹಿಂದುತ್ವದ ಫ್ಯಾಕ್ಟರಿ ಮಾಡುತ್ತೇವೆ. ಗುಜರಾತ್ ಹತ್ಯಾಕಾಂಡವನ್ನು ಹಿಂದೂ ಪರಾಕ್ರಮ ಎಂದು ಹೊಗಳಿದ್ದರು. ಈ ಬಗ್ಗೆ ಶರಣ್ ಭಾಷಣದಿಂದ ತುಮಕೂರಿನಲ್ಲಿ ಶಾಂತಿಭಂಗವಾಗಿದೆ ಎಂದು ಸೈಯದ್ ಬುರ್ಹಾನ್ ಉದ್ದೀನ್ ಅವರು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದರು. ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.