ಗಂಗೊಳ್ಳಿ- ಗ್ರಾಹಕರಿಗೆ 1.07ಕೋಟಿ ರೂ. ವಂಚನೆಗೈದ ಹಣಕಾಸು ಸಂಸ್ಥೆ

ಗಂಗೊಳ್ಳಿ ಫೆ.1(ಉಡುಪಿ ಟೈಮ್ಸ್ ವರದಿ): ಕುಂದಾಪುರದ ಬಗ್ವಾಡಿಯಲ್ಲಿರುವ  K.M.P.K.W.W.A (Padma Royal Challenge Scheme) ಎಂಬ ಹೆಸರಿನ ಹಣಕಾಸು ಸಂಸ್ಥೆಯೊಂದು ಗ್ರಾಹಕರಿಗೆ 1.07 ಕೋಟಿ ರೂ. ವಂಚಿಸಿರುವ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಈ ಹಣಕಾಸು ಸಂಸ್ಥೆಯ ಸದಸ್ಯರಾದ ಕುಂದಾಪುರ ಕುಂದಬಾರಂದಾಡಿ ಗ್ರಾಮದ ರತ್ನ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ರತ್ನ ಅವರಿಗೆ ಕೆಲ ಸಮಯದ ಹಿಂದೆ ಪದ್ಮಾ ಹೆಗ್ಡೆ ಹಾಗೂ ಮೂಕಾಂಬು ರವರು ಸೇರಿ ತಮ್ಮ ಉದ್ಯಮದಲ್ಲಿ ಸದಸ್ಯರಾದರೆ ಕ್ಯಾಶಿಯರ್ ಆಗಿ ನೇಮಕ ಮಾಡುತ್ತೇವೆ ಎಂದು ಹೇಳಿದ್ದರು. ಅಲ್ಲದೆ 2,00,000 ರೂ. ನೀಡುವಂತೆಯೂ ಸೂಚಿಸಿ 20,000 ರೂ. ಸಂಬಳ ನೀಡುವುದಾಗಿ ತಿಳಿದ್ದರು. ಅದರಂತೆ ರತ್ನ ಅವರು 2,00,000 ಡೆಪಾಸಿಟ್ ಇಟ್ಟಿದ್ದರು. ಇದರೊಂದಿಗೆ ಸಂಸ್ಥೆಗೆ ಗ್ರಾಹಕರನ್ನು ಮಾಡುವಂತೆ ಸೂಚಿಸಿ ಓರ್ವ ಗ್ರಾಹಕರನ್ನು ನೀಡಿದರೆ 100 ರೂ. ಕಮಿಷನ್ ನೀಡುವುದಾಗಿ ಹಾಗೂ ಗ್ರಾಹಕರಿಗೆ ಅವರು ನೀಡುವ ಡೆಪಾಸಿಟ್ ಆದಾರದ ಮೇಲೆ ಅದರ ಅವಧಿ ಮುಗಿದ ಬಳಿಕ ಅವರಿಗೆ ಹೆಚ್ಚುವರಿ ಹಣ ನೀಡುವುದಾಗಿಯೂ ತಿಳಿಸಿದ್ದರು.

ಅದರಂತೆ ರತ್ನ ಅವರು ಸಂಸ್ಥೆಗೆ 131 ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದರು. ಈ ಪೈಕಿ ಕೆಲವು ಗ್ರಾಹಕರಲ್ಲಿ ವಾರಕ್ಕೆ 500 ರೂಪಾಯಿ ಹಾಗೂ ಇನ್ನು ಕೆಲವು ಗ್ರಾಹಕರಲ್ಲಿ 1,000 ರೂಪಾಯಿಯನ್ನು ಸಂಗ್ರಹಿಸುತ್ತಿದ್ದರು. ಹಣವನ್ನು ಬಗ್ವಾಡಿಯಲ್ಲಿರುವ ಪದ್ಮಾ ಹೆಗ್ಡೆಯವರ ಕಛೇರಿಯಲ್ಲಿ ಪದ್ಮಾ ಹೆಗ್ಡೆ, ಸೆಲ್ವಾರಾಜ, ಪದ್ಮಾ ಹೆಗ್ಡೆ ರವರ ಮಗ ದಿಶಾಂತ್ ಹೆಗ್ಡೆ, ಮಗಳು ಸುಹಾನಿ ಹೆಗ್ಡೆ ಯವರು ಸಹಿ ಹಾಕಿ ಹಣ ಸ್ವೀಕರಿಸುತ್ತಿದ್ದರು. ರತ್ನ ಅವರು ಗ್ರಾಹಕರಿಂದ ಹಣ ಸಂಗ್ರಹಿಸುವ ಬಗ್ಗೆ ಪದ್ಮಾ ಹೆಗ್ಡೆ ಯವರು ನೀಡಿದ ಕಾರ್ಡ್‍ಗೆ ಹಣ ಸ್ವೀಕರಿಸಿದ ಬಗ್ಗೆ ಸಹಿ ಹಾಕುತ್ತಿದ್ದರು ಅಲ್ಲದೆ ಸಂಸ್ಥೆಗೆ ಗ್ರಾಹಕರಿಂದ ಹಣ ಡೆಪಾಸಿಟ್ ಇರಿಸಿಕೊಂಡು ಅವರಿಗೆ ಕರಾರು ಪತ್ರ ನೀಡುತ್ತಿದ್ದರು. ಆದರೆ ಬೇರೆ ಬೇರೆ ಗ್ರಾಹಕರ ಗುಂಪಿನಿಂದ ಸಂಗ್ರಹಿಸಿದ ಒಟ್ಟು 1,07,60,615 ರೂ. ಅವರಿಗೆ ವಾಪಸ್ಸು ನೀಡದೆ ಸಂಸ್ಥೆಯವರು ವಂಚಿಸಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಮಾತ್ರವಲ್ಲದೆ 2022 ನೇ ಸಾಲಿನ ಜೂನ್ ತಿಂಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಬಾರಂದಾಡಿ ಶಾಲೆಯನ್ನು 5 ವರ್ಷಗಳ ವರೆಗೆ ದತ್ತು ಪಡೆದು 6 ಜನ ಗೌರವ ಶಿಕ್ಷಕಿಯರನ್ನು ಹಾಗೂ ಇಬ್ಬರು ಆಯಾರನ್ನು ನೇಮಿಸಿ ಸಂಬಳ ಕೊಡುವುದಾಗಿ ಹೇಳಿದ್ದು, ಅಲ್ಲದೆ ಶಾಲಾ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವುದಾಗಿ ಹೇಳಿ ಮಕ್ಕಳಿಗೂ ಮೂಲ ಸೌಕರ್ಯವನ್ನು ಒದಗಿಸದೇ ಶಿಕ್ಷಕರಿಗೆ ಹಾಗೂ ಆಯಾಗಳಿಗೆ ಸಂಬಳ ಕೊಡದೇ ನಂಬಿಸಿ ಮೋಸ ಮಾಡಿದ್ದು, ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಹಿಂದಿರುಗಿಸಬೇಕಾದ ಹಣವನ್ನು ನೀಡದೇ ಅವರ ಕಛೇರಿಗಳನ್ನು ಬಂದ್ ಮಾಡಿ ಸದಸ್ಯರು ಹಾಗೂ ಗ್ರಾಹಕರನ್ನು ನಂಬಿಸಿ ಮೋಸ ಮಾಡಿದ್ದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!