ಕೇಂದ್ರ ಬಜೆಟ್ : ಯಾವ ಕ್ಷೇತ್ರಕ್ಕೆ… ಎಷ್ಟು ಕೊಡುಗೆ?
ನವದೆಹಲಿ ಫೆ.1 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಇಂದು 5 ನೇ ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
ಇಂದಿನ ಬಜೆಟ್‍ನ ಆರಂಭದಲ್ಲಿ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇದು ಅಮೃತಕಾಲದ ಮೊದಲ ಬಜೆಟ್. ಇದು ಹಿಂದಿನ ಬಜೆಟ್ ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು, ಮಹಿಳೆಯರು ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು ಎಂದು ಹೇಳಿದರು. ಹಾಗೂ ಅಮೃತಕಾಲದಲ್ಲಿ ನಾವು ತಂತ್ರಜ್ಞಾನದಿಂದ ಮುನ್ನಡೆಯುವ, ಜ್ಞಾನ ಆಧರಿತ ಆರ್ಥಿಕತೆ ನಿರ್ಮಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಾರ್ವಜನಿಕ ಹಣಕಾಸು ನಿರ್ವಹಣೆ ಮತ್ತು ಹಣಕಾಸು ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಬಳಿಕ ಬಜೆಟ್ ಮಂಡನೆ ಮಾಡಿದ ಅವರು, ಇಂದಿನ ಬಜೆಟ್ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ. ಅಂಚಿನಲ್ಲಿರುವವರಿಗೆ ಸವಲತ್ತು, ಮೂಲಸೌಕರ್ಯ, ಸಾಮಥ್ರ್ಯದ ಸದ್ಬಳಕೆ, ಪರಿಸರ ಸ್ನೇಹಿ ಅಭಿವೃದ್ಧಿ, ಯುವಶಕ್ತಿಗೆ ಉತ್ತೇಜನ, ಆರ್ಥಿಕ ಸುಧಾರಣೆ ಎಂಬ 7 ಅಂಶಗಳನ್ನೊಳಗೊಂಡ ಸಪ್ತ ಸೂತ್ರಗಳ ಆಧಾರದಲ್ಲಿ ಮಂಡನೆಯಾಗಿದೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಹಲವು ರೀತಿಯಲ್ಲಿ ನೆರವಾಗಲು ಕ್ರಮಗಳನ್ನು ರೂಪಿಸಲಾಗುವುದು. ಕಚ್ಚಾವಸ್ತುಗಳ ಪೂರೈಕೆ, ಬ್ರಾಂಡಿಂಗ್ ಮತ್ತು ಸಿದ್ಧವಸ್ತುಗಳಿಗೆ ಮಾರುಕಟ್ಟೆ ರೂಪಿಸಲು ಸರ್ಕಾರ ನೆರವಾಗಲಿದೆ ಎಂದು ಸಚಿವರು ಭರವಸೆ ನೀಡಿದರು.
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ರೂ. 6,000 ಕೋಟಿ ಮೊತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲ ಒದಗಿಸುವುದಾಗಿ ಭರವಸೆ ನೀಡಿದ ಅವರು, ರಾಜ್ಯಗಳ ಬಂಡವಾಳ ವೆಚ್ಚದ ಮಿತಿಯನ್ನು 1.3 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚಳವಾಗಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಘೋಷಿಸಿದರು.
ಬಜೆಟ್ ನಲ್ಲಿ ಹಸಿರು ಕ್ರಾಂತಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು ಇದಕ್ಕಾಗಿ ಪಿಎಂ ಪ್ರಣಾಮ್ ಸ್ಕೀಂ ಯೋಜನೆ ತರಲಾಗುವುದು. ಕೃಷಿಯಲ್ಲಿ ಸ್ಟಾಟಪ್ ಗಳಿಗೆ ವಿಶೇಷ ಆಧ್ಯತೆ ನೀಡಲಾಗಿದೆ. ಕೃಷಿ ಸಂಪೂರ್ಣ ಡಿಜಿಟಲೀಕರಣಕ್ಕೆ ಪ್ರಾಮುಖ್ಯ ನೀಡಿ, ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜ ಶ್ರೀ ಅನ್ನ ಜಾರಿಮಾಡಲಾಗುವುದು. ಹೈದರಬಾದ್ ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಲಾಗುವುದು. ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು ಒದಗಿಸಲಾಗುವುದು. ಈ ಸಂಸ್ಥೆಗೆ ‘ಸೆಂಟರ್ ಆಫ್ ಎಕ್ಸೆಲೆನ್ಸ್’ ಉಪಕ್ರಮದ ಮೂಲಕ ಬೆಂಬಲಿಸಲಾಗುವುದು ಎಂದು ಸಚಿವರು ಘೋಷಿಸಿದರು.
ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಳ ಹಾಗೂ ಬೆಳೆಪದ್ಧತಿ ಸುಧಾರಣೆಗಾಗಿ ‘ಶುದ್ಧ ಸಸಿ ಕಾರ್ಯಕ್ರಮ’ ಆರಂಭಿಸುವುದಾಗಿ ಸಚಿವರು ಘೋಷಿಸಿದರು.
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಹಲವು ಹೊಸ ಕ್ರಮಗಳನ್ನು ಘೋಷಿಸಿದ ಅವು, 2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್ ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
ವಸತಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ಈ ವರ್ಷದ ಬಜೆಟ್ ನಲ್ಲಿ 79,000 ಕೋಟಿ ರೂ. ಅನುದಾನ ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವ ಹಣವು ಶೇ 66ರಷ್ಟು ಹೆಚ್ಚಾಗಿದೆ. ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಬಾರಿಯ ಬಜೆಟ್ ವಿಶೇಷ ಗಮನ ಹರಿಸಲಾಗಿದ್ದು,ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಯನ್ನೂ ಒಳಗೊಂಡಂತೆ ಕೃಷಿಸಾಲಕ್ಕಾಗಿ 20 ಲಕ್ಷ ಕೋಟಿ ಮೀಸಲಿಡಲಾಗಿದೆ.
ದೇಶದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲು ಬಜೆಟ್ ಮೂಲಕ ಕೇಂದ್ರ ಸರ್ಕಾರವು ಮತ್ತಷ್ಟು ಕ್ರಮಗಳನ್ನು ಘೋಷಿಸಿದೆ. ಉದ್ಯಮಗಳು ಪ್ರತ್ಯೇಕ ಪ್ಯಾನ್ ನಂಬರ್ ಹೊಂದಬೇಕು. ಈ ನಂಬರ್ ಆಧರಿಸಿ ಉದ್ಯಮಿಗಳ ಕುಂದುಕೊರತೆಯನ್ನು ಶೀಘ್ರ ಪರಿಹರಿಸಲಾಗುವುದು. ಹಲವು ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು. ಈ ಶಾಲೆಗಳಿಗಾಗಿ 38,800 ಶಿಕ್ಷಕರು ಹಾಗೂ 740 ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಿಂದ 3.5 ಲಕ್ಷ ಗಿರಿಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ರಾಸಾಯನಿಕ ಮುಕ್ತ ಸಹಜ/ಸಾವಯವ ಕೃಷಿಗೆ ಅಗತ್ಯ ಬೆಂಬಲ ಒದಗಿಸಲು ಪರಿಣಿತರ ಸಮಿತಿಯನ್ನು ರೂಪಿಸಲಾಗುವುದು. ಸಹಜ/ಸಾವಯವ ಕೃಷಿಗೆ ಮರಳುವ 1 ಕೋಟಿ ರೈತರಿಗೆ ಸರ್ಕಾರದ ನೆರವು ಸಿಗಲಿದೆ ಎಂದು ಸಚಿವರು ಘೋಷಿಸಿದರು.
2047ರ ಹೊತ್ತಿದೆ ಮ್ಯಾನ್ ಹೋಲ್ ಮುಕ್ತ ಭಾರತ ಗುರಿ ಹೊಂದಿದ್ದು, ಭಾರತದ ಎಲ್ಲ ನಗರ ಮತ್ತು ಪಟ್ಟಣಗಳು ಸಂಪೂರ್ಣವಾಗಿ ತೆರೆದ ಚರಂಡಿಗಳು ಹಾಗೂ ಮಲಗುಂಡಿಗಳಿಂದ ಮುಕ್ತವಾಗಬೇಕು. ಮ್ಯಾನ್ ಹೋಲ್ ಮತ್ತು ಮಿಷನ್ ಹೋಲ್ ಮಾದರಿಗೆ ಬರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.