ಸತತ 5 ಬಾರಿ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ ಫೆ.1 : ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 5 ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ಮಂಡನೆ ಸಲುವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಷ್ಟ್ರಪತಿ ಭವನದಿಂದ ಸಂಸತ್ ಭವನಕ್ಕೆ ಆಗಮಿಸಿದರು. ಶೀಘ್ರ ಸಚಿವ ಸಂಪುಟ ಸಭೆ ಬಳಿಕ, 11 ಗಂಟೆಗೆ ಸಂಸತ್ ಅಧಿವೇಶನದಲ್ಲಿ ಸಚಿವರು ಬಜೆಟ್ ಮಂಡಿಸಲಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನವು ಎರಡು ಹಂತಗಳಲ್ಲಿ ನಡೆಯಲಿದೆ. ಈ ಪ್ರಕ್ರಿಯೆ ನಿನ್ನೆಯಿಂದ (ಜ 31) ಆರಂಭವಾಗಿದ್ದು, ಫೆ.13ಕ್ಕೆ ಮುಕ್ತಾಯವಾಗಲಿದೆ. ಎರಡನೇ ಹಂತದಲ್ಲಿ ಮಾರ್ಚ್ 12ರಿಂದ ಅಧಿವೇಶನ ಆರಂಭವಾಗಲಿದ್ದು, ಏಪ್ರಿಲ್ 6ರಂದು ಮುಕ್ತಾಯವಾಗಲಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇದು 5ನೇ ಬಜೆಟ್. ಈ ಸಾಧನೆ ಮಾಡಿದ 6ನೇ ಸಚಿವರು ಎಂಬ ಕೀರ್ತಿಗೆ ಅವರು ಭಾಜನರಾಗಲಿದ್ದಾರೆ.
ಈ ಮೊದಲು ಮೊರಾರ್ಜಿ ದೇಸಾಯಿ, ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರಂ, ಯಶವಂತ ಸಿನ್ಹಾ ಈ ಸಾಧನೆ ಮಾಡಿದ್ದರು. 2019 ರಿಂದ ನಿರ್ಮಲಾ ಅವರು ಬಜೆಟ್ ಮಂಡಿಸುತ್ತಿದ್ದಾರೆ.