ಕುಂದಾಪುರ: ಕಡಲ ಕಿನಾರೆಯಲ್ಲಿ 100ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳ ಸಂರಕ್ಷಣೆ

ಕುಂದಾಪುರ(ಉಡುಪಿಟೈಮ್ಸ್ ವರದಿ): ಇಲ್ಲಿಗೆ ಸಮೀಪದ ಕೋಡಿಯ ಲೈಟ್ ಹೌಸ್‌ ಬಳಿಯ ಕಡಲ ತೀರದಲ್ಲಿ ಶುಕ್ರವಾರ 100 ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿದೆ. ಸ್ಥಳೀಯರು, ಎಫ್‌ಎಸ್‌ಎಲ್‌ ಇಂಡಿಯಾ ಸಂಘಟನೆಯ ಸದಸ್ಯರ ಸಹಕಾರದಿಂದ ಮೊಟ್ಟೆಗಳನ್ನು ಸಂರಕ್ಷಿಸಲಾಗಿದೆ.

ಸ್ಥಳೀಯರಾದ ಬಾಬು ಮೊಗವೀರ ಹಾಗೂ ಗಣಪತಿ ಖಾರ್ವಿ ಅವರಿಗೆ ಈ ಅಪರೂಪದ ಕಡಲಾಮೆಯ ಮೊಟ್ಟೆಗಳು ಕಾಣಿಸಿದ್ದವು. ಅವರು, ಕಳೆದ ಕಡಲಾಮೆ ಸಂರಕ್ಷಣೆಯ ಅಂತರ ರಾಷ್ಟ್ರೀಯ ಸಂಸ್ಥೆ ಎಫ್‌ಎಸ್‌ಎಲ್‌ ಇಂಡಿಯಾ ಸದಸ್ಯರಿಗೆ ಮಾಹಿತಿ ನೀಡಿದ್ದರು. ಸಂಯೋಜಕರಾದ
ದಿನೇಶ್‌ ಸಾರಂಗ, ವೆಂಕಟೇಶ್‌ ಶೇರುಗಾರ್, ಸಂದೀಪ್‌ ಕೋಡಿ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ್‌, ಉದಯ ಖಾರ್ವಿ, ಅನಿಲ್‌ ಖಾರ್ವಿ, ದಿನೇಶ್‌ ಕೋಡಿ ಬಂದು ಮೊಟ್ಟೆಗಳ ರಕ್ಷಣೆ ಮಾಡಿದರು.

ಕುಂದಾಪುರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಹಾಗೂ ಹಸ್ತಾ ಶೆಟ್ಟಿ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಕಡಲ ತೀರದಲ್ಲಿಯೇ ಮೊಟ್ಟೆಗಳ ಸಂರಕ್ಷಣೆ ಮಾಡಿ, ಮರಿಮಾಡುವ ಗೂಡು ಹ್ಯಾಚರಿ(ಕಾಪು) ನಿರ್ಮಿಸಿದ್ದಾರೆ.

2017ರ ನಂತರ ಕಂಡು ಬಂದಿರುವ ಅಪರೂಪದ ‘ಆಲಿವ್ ರಿಡ್ಲೇ’ ಜಾತಿಗೆ ಸೇರಿದ ಈ ಕಡಲಾಮೆ ಮೊಟ್ಟೆ, ಹೊರಬರುವ ಮರಿಗಳ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ಕಣ್ಗಾವಲು ನಡೆಸಲಿದೆ ಎಂದು ತಿಳಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು, ದಿನದ 24 ಗಂಟೆ ಹ್ಯಾಚರಿ ವಿಚಕ್ಷಣೆ ನಡೆಸಲಾಗುತ್ತದೆ. ಹ್ಯಾಚರಿ ಅಥವಾ ಮೊಟ್ಟೆಗಳಿಗೆ ಹಾನಿಯುಂಟು ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಮೊಟ್ಟೆಗಳು ಪತ್ತೆಯಾಗಿರುವ ಸಂತಸ ಹಂಚಿಕೊಂಡ ಎಫ್‌ಎಸ್‌ಎಲ್‌ ಸಂಘಟನೆಯ ದಿನೇಶ್‌ ಸಾರಂಗ, ಹಲವು ವರ್ಷಗಳಿಂದ ನಮ್ಮ ಸಂಘಟನೆಯ ಮೂಲಕ ಕಡಲಾಮೆ ಹಾಗೂ ಮೊಟ್ಟೆಗಳ ಸಂರಕ್ಷಣೆ ಕಾರ್ಯಗಳು ನಡೆಯುತ್ತಿದೆ. ಶುಕ್ರವಾರ ಕೋಡಿ ಕಡಲ ತೀರದಲ್ಲಿ ಒಂದೇ ಬಾರಿ 100 ಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿರುವುದು ಸಂತೋಷ ಉಂಟುಮಾಡಿದೆ. ಮೊಟ್ಟೆಯಿಂದ ಮರಿಗಳು ಹೊರ ಬರುವ ಕೂತುಹಲ ಹೆಚ್ಚಾಗಿದೆ. ಅವು ಸುರಕ್ಷಿತವಾಗಿ ಕಡಲು ಸೇರುವವರೆಗೂ ಅರಣ್ಯ ಇಲಾಖೆಯ ಸಮನ್ವಯದೊಂದಿಗೆ ನಮ್ಮ ಸಂಘಟನೆಯ ಸದಸ್ಯರು ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!