ರಾಜ್ಯ ವಿಧಾನ ಸಭಾ ಚುನಾವಣೆ: ಎಸ್.ಡಿ.ಪಿ.ಐ ನಿಂದ ಕರಾವಳಿಯಲ್ಲಿ 10 ಕ್ಷೇತ್ರಗಳಲ್ಲಿ ಸ್ಪರ್ಧೆ

ಉಡುಪಿ ಜ.31 (ಉಡುಪಿ ಟೈಮ್ಸ್ ವರದಿ): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಪಕ್ಷ 2023 ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಿಂದ 2 ಕ್ಷೇತ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳು ಸೇರಿ ಕರಾವಳಿಯಲ್ಲಿ ಒಟ್ಟು 10 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅಪ್ಸರ್ ಕೋಡ್ಲಿಪೇಟೆ ಅವರು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು 100 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದು, ಅದರಲ್ಲಿ ಈಗಾಗಲೇ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಘೋಷಿಸಲಾಗಿದೆ. ಈ ಪೈಕಿ ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಹನೀಪ್ ಮೂಳೂರು ರವರು ಸ್ಪರ್ಧಿಸಲಿದ್ದಾರೆ ಎಂದರು. ಇದರ ಜೊತೆಗೆ ಪಕ್ಷ ಸ್ಪರ್ಧಿಸಲಿರುವ 44 ಕ್ಷೇತ್ರಗಳ ಮೊದಲ ಪಟ್ಟಿಯನ್ನೂ ಕೂಡ ಜ.7 ರಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರು ಘೋಷಣೆ ಮಾಡಿದ್ದಾರೆ. ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲೆಯ ಸಮಸ್ಯೆಗಳಿಂದ ಗೊಂದಲದಲ್ಲಿ ಬಿದ್ದು ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸುವ ಅಥವಾ ಅದಕ್ಕೆ ಪರ್ಯಾಯ ಮಾರ್ಗವನ್ನು ಸೂಚಿಸುವವರು ಯಾರು ಇಲ್ಲದಾಗಿದ್ದಾರೆ. ಉಡುಪಿ ಜಿಲ್ಲೆಯ ರಾಜಕಾರಣಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ತಮ್ಮ ರಾಜಕೀಯ ಭದ್ರತೆಯನ್ನು ಕಾಪಾಡಿಕೊಳ್ಳುವ ಭರದಲ್ಲಿದ್ದಾರೆ. ಇಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿರುವ ಯಾವುದೇ ಕುರುಹುಗಳಿಲ್ಲ ಎಂದು ಅವರು ಟೀಕಿಸಿದರು. ಹಾಗೂ ಉಡುಪಿ ಜಿಲ್ಲೆಯಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂತೆಕಟ್ಟೆ, ಅಂಬಲಪಾಡಿ, ಕಟಪಾಡಿ ಮೂರು ಸ್ಥಳಗಳಲ್ಲಿ ಜನಸಂದಣಿ ಹೆಚ್ಚಿರುವ ಕಾರಣ ಫ್ಲೈ ಓವರ್ ಬೇಕೆಂಬ ಸಾರ್ವಜನಿಕರ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಈ ಮೂರು ಸ್ಥಳಗಳಲ್ಲಿ ತುಂಬಾ ಅಪಘಾತಗಳು ನಡೆಯುತ್ತಿರುವುದರಿಂದ ಸಾರ್ವಜನಿಕರು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ಸಂಚರಿಸುವಂತಾಗಿದೆ ಎಂದರು.

ಈ ವೇಳೆ ಎಸ್‍ಡಿಪಿಐ ಗೆ ಬಿಜೆಪಿ ಜೊತೆ ನಂಟಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, 2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಕಾರಣರಾದ 17 ಶಾಸಕರ ಪೈಕಿ 14 ಜನ ಶಾಸಕರು ಕಾಂಗ್ರೆಸ್ ಪಕ್ಷದವರು, ಬಿಜೆಪಿ ಸರ್ಕಾರ ಬರಲು ಇವರೇ ಮುಖ್ಯ ಕಾರಣ, ಅವರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದರು. ಈ ರೀತಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸುವ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಎಸ್‍ಡಿಪಿಐ ಪಕ್ಷಕ್ಕೆ ಬಿಜೆಪಿಯ ಜೊತೆ ನಂಟಿದೆ ಎಂದು ಹೇಳುವುದು ನಾಚಿಕೆಗೇಡಿನ ಸಂಗತಿ. ಹಾಗೂ ಜಾತ್ಯತೀತತೆಯ ಸೋಗಿನಲ್ಲಿ ಜನರನ್ನು ವಂಚಿಸಿ ಮತ ಪಡೆದು ಗೆದ್ದ ನಂತರ ಕಾಂಗ್ರೆಸ್ ಶಾಸಕರು ಕುರಿ, ಕೋಳಿಗಳ ಹಾಗೆ ಬಿಜೆಪಿಗೆ ಹೋಲ್ ಸೇಲಾಗಿ ಮಾರಾಟವಾಗುತ್ತಾರೆ. ಬಿಜೆಪಿಗೆ ಸೇಲ್ ಆಗೋದು ಕಾಂಗ್ರೆಸ್, ಬಿಜೆಪಿಗೆ ಸೋಲೊದು ಕಾಂಗ್ರೆಸ್, ಹಾಗಿದ್ದರೂ ಸಿದ್ದರಾಮಯ್ಯನವರು ಎಸ್‍ಡಿಪಿಐ ಗೆ ಬಿಜೆಪಿ ಜೊತೆ ನಂಟಿದೆ ಎಂದು ಹೇಳುತ್ತಿರುವುದು ಅವರ ಕುತಂತ್ರ ರಾಜಕಾರಣವನ್ನು ತೋರಿಸುತ್ತದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದರು.

ಇದೇ ವೇಳೆ ಪ್ರಾಣ ಹೋಗುವ ಸನ್ನಿವೇಶ ಬಂದರೂ ಎಸ್‍ಡಿಪಿಐ, ಬಿಜೆಪಿಯ ಜೊತೆ ಒಂದೇ ಒಂದು ಹೆಜ್ಜೆಯನ್ನು ಸಹ ಹಾಕುವುದಿಲ್ಲ ಎಂದ ಅವರು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪಡೆಯುವುದಕ್ಕಾಗಿ ತಾನು ಮಾಡುವ ಎಲ್ಲಾ ಶರಣಾಗತಿಯ ಕಾರ್ಯಗಳನ್ನು ಎಸ್‍ಡಿಪಿಐ ಮೇಲೆ ಆರೋಪಿಸುತ್ತಿದೆ. ಅವರ ಈ ಕಳ್ಳಾಟ ಜನರಿಗೆ ಅರ್ಥವಾಗುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಜನರಿಗೆ ಅದು ಸ್ಪಷ್ಟವಾಗಿ ಅರ್ಥವಾಗುತ್ತದೆ ಮತ್ತು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಈ ನಂಬಿಕೆ ದ್ರೋಹಕ್ಕೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಮತ್ತು ಆರ್.ಎಸ್.ಎಸ್ ಅನ್ನು ತೋರಿಸಿ ಅಲ್ಪಸಂಖ್ಯಾತರ ಮತ್ತು ದಲಿತರ ಮತಗಳನ್ನು ಪಡೆದುಕೊಳ್ಳುವ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಆ ಎರಡು ಸಮುದಾಯಗಳ, ಯಾವ ಸಮಸ್ಯೆಗಳಿಗೂ ಸ್ಪಂದಿಸದೆ ದ್ರೋಹ ಬಗೆಯುತ್ತದೆ. ಅದರ ಜೊತೆಗೆ ಬಿಜೆಪಿ ಮತ್ತು ಆರ್.ಎಸ್.ಎಸ್ ನಡೆಸುವ ಕ್ರೌರ್ಯದ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳದೆ ಅವರಿಗೆ ಪರೋಕ್ಷ ಬೆಂಬಲ ಸೂಚಿಸುತ್ತದೆ. ಮಂಗಳೂರಿನಲ್ಲಿ ಪಂಚಾಯತ್ ಒಂದರ ಉಪಾಧ್ಯಕ್ಷರಾಗಿದ್ದ ಕಾಂಗ್ರೆಸ್‍ನ ಜಲೀಲ್ ಕರೊಪ್ಪಾಡಿ ಯವರನ್ನು ಕೊಲೆ ಮಾಡಿದ ಕೊಲೆಗಡುಕರನ್ನು ಬಿಡಿಸಿಕೊಂಡು ಬಂದ ಆರ್.ಎಸ್.ಎಸ್ ನ ನಾಯಕನನ್ನು ಪಕ್ಷಕ್ಕೆ ಬರಮಾಡಿಕೊಂಡು ತಮ್ಮದೇ ವೇದಿಕೆಯಲ್ಲಿ ಕೂರಿಸಿಕೊಂಡರೂ ಸಿದ್ದರಾಮಯ್ಯ ಎಸ್‍ಡಿಪಿಐ ಮೇಲೆ ಆರೋಪ ಮಾಡುತ್ತಿದ್ದಾರೆ. ಆ ಮೂಲಕ ಅವರ ಪಕ್ಷದ ಹುಳುಕನ್ನು ಮುಚ್ಚಿರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಎಸ್.ಡಿ.ಪಿ.ಐ ಉಡುಪಿ ಜಿಲ್ಲಾಧ್ಯಕ್ಷರಾದ ಶಾಹಿದ್ ಅಲಿ, ರಾಜ್ಯ ಮುಖಂಡ ನವಾಝ್ ಉಳ್ಳಾಲ್, ಉಡುಪಿ ಜಿಲ್ಲಾ ಉಪಾಧ್ಯಕ್ಷ ಖಲೀಲ್ ಅಹ್ಮದ್, ಹನೀಫ್ ಮೂಳೂರು, ರಜಾಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!