ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಬಿ.ಕಾಂ ವಿದ್ಯಾರ್ಥಿ ಆತ್ಮಹತ್ಯೆ

ಬೆಳ್ತಂಗಡಿ, ಜ.30 : ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯೊರ್ವ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ (19) ಆತ್ಮಹತ್ಯೆ ಮಾಡಿಕೊಂಡಿರುವವರು.

ಹರ್ಷಿತ್ ಅವರಿಗೆ ಇನ್‍ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಆ ಬಳಿಕ ಹರ್ಷಿತ್ ಆತನೊಂದಿಗೆ ಇನ್ ಸ್ಟಾಗ್ರಾಂ ಮೂಲಕ ಚಾಟ್ ಮಾಡಿಕೊಂಡಿದ್ದ. ಆ ಬಳಿಕ ಅಪರಿಚಿತ ವ್ಯಕ್ತಿಯು ಮೊಬೈಲ್ ಗೆ ವಿಡಿಯೋ ಕಾಲ್ ಮಾಡಿ ಮಾತಾಡಿ, ಹರ್ಷಿತ್ ಬಳಿ ನಿಮ್ಮ ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ, ವೈರಲ್ ಮಾಡಬಾರದು ಎಂದಾದರೆ ತನಗೆ 11,000 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು. ಇದಕ್ಕೆ ಹರ್ಷಿತ್ ಜ.23 ರವರೆಗೆ ಅವಕಾಶ ಕೊಡುವಂತೆ ಕೇಳಿದ್ದು, ಆದರೆ ಜ.24 ಮಧ್ಯಾಹ್ನದವರೆಗೂ ಹಣ ಹೊಂದಿಸಲು ಸಾಧ್ಯವಾಗದೇ ಇದ್ದುದ್ದರಿಂದ ಹಣ ಕೊಡದ ಕಾರಣ ಆತನು ವೈಯಕ್ತಿಕ ವಿಡಿಯೋ ವೈರಲ್ ಮಾಡಿದರೆ ಮಾನ ಹೋಗಬಹುದೆಂಬ ಭಯದಿಂದ ಜ.24 ರಂದು ಮಧ್ಯಾಹ್ನದ ವೇಳೆ ಹರ್ಷಿತ್ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದರು.

ಈ ವೇಳೆ ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಜಿರೆಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸಿದೆ ನಿನ್ನೆ ಸಂಜೆ ವೇಳೆ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವನೀಯ ವ್ಯಕ್ತಿಗಳ ಗಮನಕ್ಕೆ, ಸಹಾಯವಾಣಿ ನಂಬರ್ : 080 2572 2573, ಸಮರ್ಥನಂ ಆವರಣ, 15ನೇ ಕ್ರಾಸ್, ಹೆಚ್‍ಎಸ್‍ಆರ್ ಸೆಕ್ಟರ್- 4, ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!