ಅತ್ತೂರು :ಸರಳ ರೀತಿಯಲ್ಲಿ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಪುಣ್ಯಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ಅತ್ತೂರು ಸಂತ ಲಾರನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಕಳೆದ 5 ದಿನಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದೆ. ಅತ್ತೂರು ಮಹೋತ್ಸವದ 6 ನೇ ದಿನವಾದ ಇಂದು ಎಂದಿನಂತೆ ಬೆಳಗ್ಗೆ 8 ಗಂಟೆಗೆ, 10 ಗಂಟೆಗೆ, 12 ಗಂಟೆಗೆ ಹಾಗೂ ಮಧ್ಯಾನ 3 ಮತ್ತು 5 ಗಂಟೆಗೆ ಒಟ್ಟು ಐದು ಬಲಿ ಪೂಜೆಗಳು ನೆರವೇರಿದವು.

ಈ ಬಗ್ಗೆ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್ ಚೇತನ್ ಅವರು ಮಾಹಿತಿ ನೀಡಿ, ಪ್ರತೀ ವರ್ಷ ವಿಜೃಂಭನೆಯಿಂದ ನಡೆಯುವ ಅತ್ತೂರು ಸಂತ ಲಾರೆನ್ಸರ ವಾರ್ಷಿಕ ಮಹೋತ್ಸವ, ಈ ಬಾರಿ ಕೋವಿಡ್-19ನ ನಿಮಿತ್ತ ವಠಾರದಲ್ಲಿ ಅಂಗಡಿ-ಮುಂಗಟ್ಟುಗಳು ಹಾಗೂ ಜಾತ್ರೆ ಸಂತೆಗಳು ಇಲ್ಲವಾಗಿವೆ. ಇದರ ನಡುವೆಯೂ ಪ್ರತಿವರ್ಷದಂತೆ ಜನಸಂದಣಿ ಇಲ್ಲವಾದರೂ ಕೂಡಾ ಕ್ಷೇತಕ್ಕೆ ಗಣನೀಯ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಆದರೆ ಅತ್ತೂರು ಕ್ಷೇತ್ರದ ವಠಾರ ಮಾತ್ರ ವಿವಿಧ ಬಗೆಯ ಸಂತೆಗಳಿಲ್ಲದೆ ಬಿಕೋ ಎನ್ನುತ್ತಿದೆ.

ಇನ್ನು ಜನವರಿ 18 ರಂದು ಆರಂಭವಾದ ಕಾರ್ಕಳದ ಅತ್ತೂರು ಸಂತ ಲಾರನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವದ ಐದನೇ ದಿನವಾದ ನಿನ್ನೆ ಶುಕ್ರವಾರ ದಿನದ ಐದೂ ಬಲಿಪೂಜೆಗಳಿಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಈ ವೇಳೆ ಸಂತ ಲಾರೆನ್ಸರ ನವೇನಾ ಪ್ರಾರ್ಥನೆ ಹಾಗೂ ರೋಗಿಗಳಿಗಾಗಿ ವಿಶೇಷ ಪ್ರಾರ್ಥನೆಗಳು ನಡೆದವು. ಮಹೋತ್ಸವಕ್ಕೆ ಭೇಟಿ ನೀಡುತ್ತಿರುವ ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು. ವಾರಾಂತ್ಯದಲ್ಲಿ ಇದು ವೃದ್ದಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ದಿನದ ಬಲಿಪೂಜೆಗಳನ್ನು ಮೂಡುಬೆಳ್ಳೆಯ ಫಾದರ್ ಚಾರ್ಲ್ಸ್ ಫುರ್ಟಾಡೊ, ಗಂಟಾಲ್‌ಕಟ್ಟೆಯ ಫಾದರ್ ರೊನಾಲ್ಡ್ ಪ್ರಕಾಶ್ ಡಿಸೋಜಾ, ಆಳದಂಗಡಿಯ ಫಾದರ್ ನವೀನ್ ಪಿಂಟೊ, ಸಂದೇಶ ಪ್ರತಿಷ್ಟಾನದ ನಿರ್ದೇಶಕ ಫಾದರ್ ಆಸಿಸಿ ಆಲ್ಮೇಡ ಹಾಗೂ ಪಲಿಮಾರಿನ ಪಾದರ್ ರೊಕ್ ಡಿಸೋಜಾ ನರವೇರಿಸಿದರು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!