ಇಂದಿನಿಂದ ಆನ್ಲೈನ್ನಲ್ಲಿ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಲಭ್ಯ
ಹೊಸದಿಲ್ಲಿ, ಜ.26 : ಇಂದಿನಿಂದ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರತಿ ಆನ್ಲೈನ್ ನಲ್ಲಿ ಲಭ್ಯವಾಗಲಿದೆ.
ಈ ನೂತನ ಆನ್ಲೈನ್ ಸೇವೆಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, “ಇ-ಎಸ್ಸಿಆರ್ ಯೋಜನೆ ಅಡಿಯ ಈಗ ನಮ್ಮಲ್ಲಿ ಸುಮಾರು 34,000 ತೀರ್ಪುಗಳಿವೆ. ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ 1,268 ತೀರ್ಪುಗಳು ಲಭ್ಯವಿವೆ. ಹಾಗೂ ಈ ತೀರ್ಪುಗಳು ಸುಪ್ರೀಂ ಕೋರ್ಟ್ ನ ವೆಬ್ಸೈಟ್, ಮೊಬೈಲ್ ಆಪ್ ಹಾಗೂ ನ್ಯಾಷನಲ್ ಜುಡೀಷಿಯಲ್ ಡಾಟಾ ಗ್ರಿಡ್ ನ್ ಜಡ್ಜಮೆಂಟ್ ಪೋರ್ಟಲ್ ನಲ್ಲಿ ಲಭ್ಯವಿರಲಿದೆ. ದೇಶಾದ್ಯಂತ ಇರುವ ವಕೀಲರು ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು. ಯುವ ವಕೀಲರು ಶುಲ್ಕ ಪಾವತಿಸುವ ಅಗತ್ಯತೆ ಇಲ್ಲ. ನಾವು ಸರ್ಚ್ ಎಂಜಿನ್ ಅನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ. ಸದ್ಯ 2023 ಜನವರಿ 1ರ ವರೆಗಿನ ತೀರ್ಪುಗಳು ಆನ್ಲೈನ್ ನಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದರು.
ಇಲೆಕ್ಟ್ರಾನಿಕ್ಸ್ ಸುಪ್ರೀಂ ಕೋರ್ಟ್ ರಿಪೋಟ್ರ್ಸ್ ನ ಭಾಗವಾಗಿ ನ್ಯಾಯಾಲಯವು ಹಿಂದಿ, ಒರಿಸ್ಸಾ, ಮರಾಠಿ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪಿನ ಪ್ರತಿಗಳನ್ನು ಉಚಿತವಾಗಿ ಒದಗಿಸಲು ನಿರ್ಧರಿಸಿದೆ ಎಂದು ಅವರು ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ ವಕೀಲರಿಗೆ ತಿಳಿಸಿದರು.
ಗಣರಾಜ್ಯೋತ್ಸವದ ದಿನದಂದು ಸುಪ್ರೀಂ ಕೋರ್ಟ್ ನ ರಿಜಿಸ್ಟ್ರಿ ಭಾರತದ ವಿವಿಧ ಭಾಷೆಗಳಿಗೆ ಭಾಷಾಂತರಗೊಂಡ 1268 ತೀರ್ಪುಗಳನ್ನು ಬಿಡುಗಡೆ ಮಾಡಲಿದೆ. ಭಾಷಾಂತರಗೊಂಡ ಸುಪ್ರೀಂ ಕೋರ್ಟ್ ನ ತೀರ್ಪು ಅಸ್ಸಾಮಿ, ಗಾರೊ, ಹಿಂದಿ, ಕನ್ನಡ, ಖಾಸಿ, ಮಲೆಯಾಳಂ, ಮರಾಠಿ, ನೇಪಾಳಿ, ಒರಿಸಾ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಹೀಗೆ 13 ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
‘‘ಆರಂಭದಲ್ಲಿ ಈ 1268 ತೀರ್ಪುಗಳಲ್ಲಿ ಹಿಂದಿಯಲ್ಲಿ 1091, ಕನ್ನಡದಲ್ಲಿ 17, ಒರಿಯಾದಲ್ಲಿ 21, ಮರಾಠಿಯಲ್ಲಿ 14, ಅಸ್ಸಾಮಿಯಲ್ಲಿ 4, ಮಲೆಯಾಳಂನಲ್ಲಿ 29, ನೇಪಾಳಿಯಲ್ಲಿ 3, ಪಂಜಾಬಿಯಲ್ಲಿ 4, ತಮಿಳಿನಲ್ಲಿ 52, ತೆಲುಗಿನಲ್ಲಿ 28 ಹಾಗೂ ಉರ್ದುವಿನಲ್ಲಿ 3 ತೀರ್ಪುಗಳು ಇ-ಎಸ್ಸಿಆರ್ ಪೋರ್ಟಲ್ನಲ್ಲಿ ಲಭ್ಯವಾಗಲಿದೆ’’ ಎಂದು ಅವರು ತಿಳಿಸಿದರು ಮುಂದೆ 22 ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪುಗಳನ್ನು ಒದಗಿಸುವ ಗುರಿಯನ್ನು ಸುಪ್ರೀಂ ಕೋರ್ಟ್ ಹೊಂದಿದೆ ಎಂದು ತಿಳಿದು ಬಂದಿದೆ.