ಸೀಲ್ ಡೌನ್ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಉಡುಪಿ(ಉಡುಪಿ ಟೈಮ್ಸ್ ವರದಿ): ಸೀಲ್‌ಡೌನ್ ಮಾಡಲಾಗಿದ್ದ ಮನೆಯೊಂದರಲ್ಲಿ ಎರಡು ತಿಂಗಳ ಬಳಿಕ ಮೃತ ದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೆಮ್ಮಣ್ಣು ಸಮೀಪದ ಎಡಬೆಟ್ಟು ಎಂಬಲ್ಲಿ ಇಂದು ನಡೆದಿದೆ.
ಮೃತರನ್ನು ಶೇಖರ ಪೂಜಾರಿ (55) ಎಂದು ಗುರುತಿಸಲಾಗಿದೆ. ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ಅವರನ್ನು, ಅತಿಯಾದ ಮದ್ಯ ಸೇವಿಸಿ ತೊಂದರೆ ಕೊಡುತ್ತಿದ್ದ ಕಾರಣಕ್ಕೆ 12 ವರ್ಷಗಳ ಹಿಂದೆ ಹೆಂಡತಿ ಮತ್ತು ಮಕ್ಕಳ ಬಿಟ್ಟು ಹೋಗಿದ್ದರು. ಲಾಕ್‌ಡೌನ್ ಕಾರಣ ಮುಂಬೈಯಿಂದ ಜು.20ರಂದು ಊರಿಗೆ ಬಂದ ಹಿನ್ನೆಲೆಯಲ್ಲಿ ಜು.21ರಂದು ಅಧಿಕಾರಿಗಳು ಇವರ ಮನೆ ಯನ್ನು ಸೀಲ್ ಡೌನ್ ಮಾಡಿದರು. ಬಳಿಕ ಅವರು ಯಾರ ಸಂಪರ್ಕಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಉಂಟಾದ ಪ್ರವಾಹದಿಂದ ಅವರ ಮನೆಗೂ ಹಾನಿಯಾಗಿರುವ ಸಾಧ್ಯತೆ ಇರುವುದರಿಂದ ಮನೆಯನ್ನು ಪರಿಶೀಲಿಸಲು ಹೋದ ಅಧಿಕಾರಿಗಳಿಗೆ ಮೃತದೇಹ ಕಂಡು ಬಂದಿದೆ. ಅತಿಯಾದ ಮದ್ಯಪಾನ ಅಥವಾ ಇನ್ಯಾವುದೋ ಕಾರಣದಿಂದ ಅವರು ಎರಡು ತಿಂಗಳ ಅವಧಿಯಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.