ಬಂಟ್ವಾಳ: ಚರ್ಚ್ ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ
ಬಂಟ್ವಾಳ (ಉಡುಪಿ ಟೈಮ್ಸ್ ವರದಿ): ಇಲ್ಲಿನ ಚರ್ಚ್ ಒಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿರುವ ಘಟನೆ ದ.ಕ ಜಿಲ್ಲೆಯ ಬಂಟ್ವಾಳದ ನಾವೂರು ಗ್ರಾಮದ ಫರ್ಲ ಚರ್ಚ್ ನಲ್ಲಿ ನಡೆದಿದೆ. ಜ.22 ರ ರಾತ್ರಿ ಚರ್ಚ್ ನ ಬಾಗಿಲನ್ನು ಮುರಿದು ಒಳಕ್ಕೆ ನುಗ್ಗಿ ಕಳ್ಳರು ಹಣಕ್ಕಾಗಿ ಹುಡುಕಾಡಿದ್ದಾರೆ. ಹಣ ಸಿಗದೇ ಇದ್ದಾಗ ಚರ್ಚಿನಲ್ಲಿದ್ದ ಪವಿತ್ರ ವಸ್ತುಗಳಿಗೆ ಕಳ್ಳರು ಹಾನಿಗೆಡವಿ ಪರಾರಿಯಾಗಿದ್ದಾರೆ.
ಇನ್ನು ಕಳ್ಳರು ಚರ್ಚಿನೊಳಗೆ ನುಗ್ಗುವ ದೃಶ್ಯವು ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆದರೆ ಕಳ್ಳರ ಗುರುತು ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.