ಬಿಜೆಪಿ ಸರ್ಕಾರದಿಂದ ಶೇ.40ರಷ್ಟು ಲಂಚದ ಮೂಲಕ 1.5 ಲಕ್ಷ ಕೋಟಿ ಲೂಟಿ-ಪ್ರಿಯಾಂಕಾ ಗಾಂಧಿ ಆರೋಪ
ಬೆಂಗಳೂರು ಜ.16 : ಮೂರು ವರ್ಷಗಳ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಶೇಕಡ 40ರಷ್ಟು ಲಂಚದ ಮೂಲಕ 1.5 ಲಕ್ಷ ಕೋಟಿ ಲೂಟಿ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಕೆಪಿಸಿಸಿ ವತಿಯಿಂದ ನಗರದ ಅರಮನೆ ಆವರಣದಲ್ಲಿ ಆಯೋಜಿಸಿದ `ನಾ ನಾಯಕಿ' ಸಮಾವೇಶದಲ್ಲಿ ಮಾತನಾಡಿದ ಅವರು, ಬಿಬಿಎಂಪಿಯಲ್ಲಿ 8,000 ಕೋಟಿ ಮೊತ್ತದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದರೆ, 3,200 ಕೋಟಿ (ಶೇ.40) ಸರ್ಕಾರದಲ್ಲಿರುವವರಿಗೆ ಸಂದಾಯ ಆಗುತ್ತಿದೆ. ಜನರ ಹಣದ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ.
ಇಲ್ಲಿನ ಸರ್ಕಾರ ಯಾವ ಕೆಲಸ ಮಾಡಿದರೂ ಶೇ 40ರಷ್ಟು ಲಂಚ ಪಡೆಯುತ್ತಿದೆ. ಜನರ ತೆರಿಗೆಯ ಹಣ ಲಂಚದ ರೂಪದಲ್ಲಿ ಸರ್ಕಾರದಲ್ಲಿರುವ ಕೆಲವರ ಜೇಬು ಸೇರುತ್ತಿದೆ’ ಎಂದರು.
ಭ್ರಷ್ಟಾಚಾರದ ವಿಷಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಅನೇಕ ಕಸರತ್ತು ಮಾಡುತ್ತಿದ್ದಾರೆ. ಮಕ್ಕಳ ಕಲಿಕೆಯ ಪಠ್ಯಕ್ರಮಕ್ಕೂ ಕೈ ಹಾಕಿದ್ದಾರೆ. ಬಸವಣ್ಣ ಸೇರಿದಂತೆ ಅನೇಕ ಮಹನೀಯರಿಗೆ ಸಂಬಂಧಿಸಿದ ಪಠ್ಯಗಳನ್ನು ತಿರುಚಿದ್ದಾರೆ. ಇದೆಲ್ಲವೂ ಕೆಲವರ ಆಣತಿಯಂತೆ ನಡೆದಿದೆ ಎಂದು ದೂರಿದರು. ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರ ಬದುಕು ದುಸ್ತರವಾಗಿದೆ. ಡಾ. ಮನಮೋಹನ್ ಸಿಂಗ್ ಸರ್ಕಾರದ ಅವಧಿಗೆ ಹೋಲಿಸಿದರೆ ಎಲ್ಪಿಜಿ ಸಿಲಿಂಡರ್ ದರ ದುಪ್ಪಟ್ಟಿಗಿಂತ ಜಾಸ್ತಿಯಾಗಿದೆ ಎಂದು ದೂರಿದರು.
ಇದೇ ವೇಳೆ `ಇಂತಹ ಸರ್ಕಾರದಿಂದ ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗ ದೊರಕುವ ಭರವಸೆ ಇದೆಯೆ? ಇವರಿಂದ ಭವಿಷ್ಯ ಉತ್ತಮಗೊಳ್ಳುವ ಭರವಸೆ ಇದೆಯೆ’ ಎಂದು ಪ್ರಶ್ನಿಸಿದ ಅವರು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ನಡೆದಿರುವ ಹಗರಣ ನಾಚಿಕೆಗೇಡಿನ ಸಂಗತಿ. ಬಿಜೆಪಿ ಸರ್ಕಾರವು ಪೊಲೀಸ್ ಪಡೆಗಳನ್ನೂ ಮಾರಾಟಕ್ಕೆ ಇಟ್ಟಿರುವುದಕ್ಕೆ ಸಾಕ್ಷಿ. ವಾಹನ ಚಾಲನಾ ಪರವಾನಗಿ, ನೋಂದಣಿ ಎಲ್ಲದಕ್ಕೂ ಲಂಚ ಕೊಡಬೇಕು. ಅಧಿಕಾರಿಗಳ ನೇಮಕ, ವರ್ಗಾವಣೆ, ಸ್ಥಳ ನಿಯುಕ್ತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಹೇಳಿದರು.