2024ರಲ್ಲೂ ಮೋದಿಯೇ ಪ್ರಧಾನಿ: ಅಮಿತ್ ಶಾ ವಿಶ್ವಾಸ
ಗಾಂಧಿನಗರ, ಜ.16: 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪುನರಾಯ್ಕೆಗೊಳ್ಳುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆಗಳನ್ನು ನೆರವೇರಿಸಲು ಮತ್ತು ಯೋಜನೆಗಳನ್ನು ಉದ್ಘಾಟಿಸಲು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮುಕ್ತಾಯಗೊಂಡಿರುವ ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯು ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೂ ಮುಖ್ಯವಾಗಿದೆ. ಗುಜರಾತ್ ನ ಜನತೆ ದಾಖಲೆಯ ಸ್ಥಾನಗಳಿಂದ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಗೆ ಸಹಾಯ ಮಾಡಿದ್ದಾರೆ, ಆ ಮೂಲಕ ರಾಜ್ಯ ಮತ್ತು ಪ್ರಧಾನಿ ಮೋದಿಯವರನ್ನು ಅವಮಾನಿಸಲು ಯತ್ನಿಸಿದವರಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚುನಾವಣೆಯು 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪುನರಾಯ್ಕೆಗೊಳ್ಳುತ್ತಾರೆ ಎನ್ನುವ ಸಂದೇಶವನ್ನು ನೀಡಿದೆ ಎಂದರು.
ಹಾಗೂ “ಜಾತೀಯತೆಯ ವಿಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಗುಜರಾತ್ನ ಜನತೆ ಶ್ರಮಿಸಿದ್ದಾರೆ ಹಾಗೂ ಪೊಳ್ಳು ಮತ್ತು ಸುಳ್ಳು ಭರವಸೆಗಳನ್ನು ನೀಡುವವರಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅವರು ಹೇಳಿದರು.