ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ಯುವಕರು, ಕಾರಣ ಏನು ಗೊತ್ತಾ..?
ನವದೆಹಲಿ ಜ.14 : ಸ್ಪೈಸ್ ಜೆಟ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ.
ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಈ ಬೆದರಿಕೆ ಕರೆಯನ್ನು ಪ್ರೇಯಸಿಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಮೂವರು ಯುವಕರು ಒಟ್ಟು ಸೇರಿ ಮಾಡಿದ್ದು ಎಂದು ತಿಳಿದು ಬಂದಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಮೂವರು ಯುವಕರ ಪೈಕಿ ಅಭಿನವ್ ಪ್ರಕಾಶ್ (24) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಬಳಿಕ ಅಭಿನವ್ ನ ಇಬ್ಬರೂ ಸ್ನೇಹಿತರು ನಾಪತ್ತೆಯಾಗಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದ ಸ್ಪೈಸ್ ಜೆಟ್ ಕಾಲ್ ಸೆಂಟರ್ ಗೆ ಕರೆಯೊಂದು ಬಂದಿದ್ದು, ವಿಮಾನಕ್ಕೆ ಬಾಂಬ್ ಇಡಲಾಗಿದೆ ಎಂದು ಬೆದರಿಸಿದ್ದರು. ಇದರಿಂದ ಕೆಲ ಕಾಲ ತೀವ್ರ ಆತಂಕ ಉಂಟಾಗಿತ್ತು. ಈ ಹುಸಿ ಬಾಂಬ್ ಕರೆ ಮಾಡಿದವರ ಜಾಡು ಹುಡುಕಿಕೊಂಡು ಹೋದಾಗ ಮೊದಲು ಅಭಿನವ್ ಪ್ರಕಾಶ್ ಎಂಬಾತ ಸಿಕ್ಕಾಕಿಕೊಂಡಿದ್ದಾನೆ. ಈತ ಬ್ರಿಟೀಷ್ ಏರ್ವೇಸ್ ಗೆ ಟಿಕೆಟಿಂಗ್ ಏಜೆಂಟ್ ಆಗಿ ತರಬೇತಿ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ 182 ಪ್ರಯಾಣಿಕರು ವಿಮಾನ ಸಿಬ್ಬಂದಿಗಳನ್ನು ತಕ್ಷಣವೇ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ವೇಳೆ ಬಂದ ಫೋನ್ ನಂಬರ್ ನ್ನು ಪರಿಶೀಲಿಸಿದಾಗ ಅದು ಅಭಿನವ್ ಪ್ರಕಾಶ್ ಅವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿತ್ತು. ಕೂಡಲೇ ಅಭಿನವ್ ಪ್ರಕಾಶ್ ಅವರನ್ನು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ.
ಅಭಿನವ್ ಪ್ರಕಾಶ್ ತನ್ನ ಸ್ನೇಹಿತರಾದ ರಾಕೇಶ್ ಅಲಿಯಾಸ್ ಬಂಟಿ ಹಾಗೂ ಕುನಾಲ್ ಸೆಹ್ರವಾತ್ ಮನಾಲಿಗೆ ಹೋಗಿದ್ದಾಗ ಅಲ್ಲಿ ಇಬ್ಬರು ಯುವತಿಯರೊಂದಿಗೆ ಪರಿಚಯವಾಗಿತ್ತು. ಅದೇ ಇಬ್ಬರೂ ಯುವತಿಯರು ಪುಣೆಗೆ ಎಸ್.ಜಿ 8938 ವಿಮಾನದಲ್ಲೇ ತೆರಳಬೇಕಿತ್ತು. ಯುವತಿಯರೊಂದಿಗೆ ತಾವು ಹೆಚ್ಚು ಸಮಯ ಕಳೆಯಬೇಕಾಗಿದ್ದರಿಂದ ಮೂವರೂ ಸೇರಿ ಹುಸಿ ಬಾಂಬ್ ಕರೆ ಮೂಲಕ ತಮ್ಮ ಯೋಜನೆಯನ್ನು ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.