ಸರ್ಕಾರದ ವಿವಿಧ ಇಲಾಖೆಗಳ ವರ್ಗಾವಣೆ ದಂಧೆಯಲ್ಲಿ ಭಾಗಿ-ಸ್ಯಾಂಟ್ರೊ ರವಿ ವಿರುದ್ಧ ಮತ್ತೊಂದು ಆರೋಪ

ಬೆಂಗಳೂರು ಜ.14 : ಅತ್ಯಾಚಾರವೆಸಗಿ ಹಲ್ಲೆ ಮಾಡಿ ಕೊಲೆ ಬೆದರಿಕೆಯೊಡ್ಡಿದ್ದ ಪ್ರಕರಣದಲ್ಲಿ ಬಂಧಿತ ನಾಗಿರುವ ಸ್ಯಾಂಟ್ರೊ ರವಿ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ.

ಇದೀಗ ಸ್ಯಾಂಟ್ರೊ ರವಿ ವಿರುದ್ಧ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದನೆಂಬ ಆರೋಪ ಕೇಳಿ ಬಂದಿದ್ದು, ಮೈಸೂರು ವಿಜಯನಗರ ಠಾಣೆಗೆ ಜ.2 ರಂದು ದೂರು ನೀಡಿರುವ ಆತನ ಎರಡನೇ ಪತ್ನಿ, ವಾಟ್ಸ್ ಆ್ಯಪ್ ಸಂದೇಶ ಹಾಗೂ ಸ್ಟೇಟಸ್ ಗಳನ್ನು ಪುರಾವೆಯಾಗಿ ನೀಡಿದ್ದಾರೆ.

ವಿಜಯನಗರದ ನಾಲ್ಕನೇ ಹಂತದಲ್ಲಿರುವ ಮನೆಯಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಎಂಟರ್ ಪ್ರೈಸಸ್ ಹೆಸರಿನ ಕಚೇರಿ ತೆರೆದಿದ್ದ ಸ್ಯಾಂಟ್ರೊ ರವಿ, ತಾನೊಬ್ಬ ಫೈನಾನ್ಶಿಯರ್ ಎಂಬುದಾಗಿ ಹೇಳಿಕೊಳ್ಳುತ್ತಿದ್ದ.ಕೆ.ಎಸ್. ಮಂಜುನಾಥ್, ಬಿ.ಎ ಫೈನಾನ್ಶಿಯರ್’ ಎಂಬ ಫಲಕವನ್ನೂ ಕಚೇರಿಯಲ್ಲಿ ನೇತು ಹಾಕಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಮೈಸೂರು ಕಮಿಷನರೇಟ್ ಪೊಲೀಸ್ ಅಧಿಕಾರಿಯೊಬ್ಬರು, `ಅತ್ಯಾಚಾರ, ಹಲ್ಲೆ, ಜೀವ ಬೆದರಿಕೆ, ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆ ದೂರು ನೀಡಿದ್ದಾರೆ. ಅದರನ್ವಯ ಮಾತ್ರ ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿದೆ. ಉಳಿದಂತೆ, ವರ್ಗಾವಣೆ ಹಾಗೂ ವೇಶ್ಯಾವಾಟಿಕೆ ಆಯಾಮದಲ್ಲಿ ತನಿಖೆ ನಡೆಸುವುದು ನಮ್ಮ ವ್ಯಾಪ್ತಿಗೆ ಮೀರಿದ್ದು’ ಎಂದು ಹೇಳಿದ್ದಾರೆ.

ರವಿ ತನ್ನ ಸ್ಟೇಟಸ್ ಗಳಲ್ಲಿ ವರ್ಗಾವಣೆಗೆ ಸಂಬಂಧಪಟ್ಟಂತೆ ಹಲವು ಮಾಹಿತಿ ಹಂಚಿಕೊಂಡಿದ್ದು, 2022ರಲ್ಲಿ ರಾಜ್ಯದ ಹಲವು ಪಿ.ಎಸ್.ಐಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಸಿಬ್ಬಂದಿ ಮಂಡಳಿ ಆದೇಶ ಹೊರಡಿಸಿತ್ತು. ಆದೇಶ ಪ್ರತಿಯನ್ನು ವಾಟ್ಸ್ ಆ್ಯಪ್ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದ ಸ್ಯಾಂಟ್ರೊ ರವಿ, `ಇದು ನನ್ನ ಕೆಲಸ. 2022ರ ಮೊದಲ ಜಯ’ ಎಂಬುದಾಗಿ ಬರೆದುಕೊಂಡು ಸಂಭ್ರಮಿಸಿದ್ದ. ವರ್ಗಾವಣೆ ಆದೇಶ ಪತ್ರದಲ್ಲಿದ್ದ ಪಿ.ಎಸ್.ಐ ಡಿ.ರವಿಕುಮಾರ್ (ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಹಲಗೂರು ಪೊಲೀಸ್ ಠಾಣೆಗೆ ವರ್ಗ) ಹೆಸರನ್ನು ಗುರುತು ಮಾಡಿದ್ದ. ಆದರೆ ಈ ವರ್ಗಾವಣೆಗೂ ರವಿಗೂ ಸಂಬಂಧವೇನು ? ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ.

ಇದು ಮಾತ್ರವಲ್ಲದೆ ಶಿವಮೊಗ್ಗ ಕೇಂದ್ರ ಕಾರಾಗೃಹ ಅಧೀಕ್ಷಕ ಮಹೇಶ್‍ಕುಮಾರ್ ಜಿಗಣಿ ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ ಅವರ ಜಾಗಕ್ಕೆ ವರ್ಗಾಯಿಸಲು ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಪತ್ರ ಬರೆದಿದ್ದರು. ಅದನ್ನು ಉಲ್ಲೇಖಿಸಿ ಕಾರಾಗೃಹ ಇಲಾಖೆಯ ಡಿಜಿಪಿಯವರಿಗೆ ನಿರ್ದೇಶನ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ, ವರ್ಗಾವಣೆ ಮಾಡುವಂತೆ ಸೂಚಿಸಿದ್ದರು. ಇದರೊಂದಿಗೆ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ. ಕುಲಕರ್ಣಿ ಅವರನ್ನು ಅದೇ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಈ ಎರಡೂ ಆದೇಶಗಳನ್ನೂ ವಿಕ್ಟರಿ ಎಮೋಜಿ ಸಮೇತ ತನ್ನ ಸ್ಟೇಟಸ್ ನಲ್ಲಿ ಹಾಕಿಕೊಂಡಿದ್ದ. ಈ ಎಲ್ಲಾ ಆದೇಶಗಳಿಗೂ ಸ್ಯಾಂಟ್ರೊ ರವಿಗೂ ಏನು ಸಂಬಂಧ ಎಂಬ ಪ್ರಶ್ನೆ ಹುಟ್ಟಿಕೊಂಡಿದ್ದು, ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

ಈ ನಡುವೆ ಸ್ಯಾಂಟ್ರೊ ರವಿ ಜತೆಗೆ ಬಿಜೆಪಿ ಸರ್ಕಾರದ ಸಚಿವರು ಹೊಂದಿರುವ ನಂಟಿನ ಕುರಿತು ಲೋಕಾಯುಕ್ತ ಅಥವಾ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ರವಿ ಬಂಧನದ ಬಳಿಕ ಕೆಪಿಸಿಸಿ ಅಧಿಕೃತ ಟ್ವಿಟರ್ ಖಾತೆಯಿಂದ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ‘ಆತನ ಪತ್ನಿ ನೀಡಿದ್ದ ದೂರಿನ ಆಧಾರದಲ್ಲಿ ರವಿಯ ಬಂಧನವಾಗಿದೆ. ಇದಕ್ಕೆ ಸರ್ಕಾರದ ದೂರು ಕಾರಣವಲ್ಲ, ವರ್ಗಾವಣೆ ದಂಧೆಯ ಬಗ್ಗೆ ಇನ್ನೂ ತನಿಖೆ ಆರಂಭವಾಗಿಲ್ಲ. ಸಚಿವರು ಮತ್ತು ಸರ್ಕಾರದ ಜತೆಗಿನ ಆತನ ನಂಟು ಹಾಗೂ ವರ್ಗಾವಣೆ ದಂಧೆ ಕುರಿತು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಲಾಗಿದೆ.

‘ಎಲ್ಲ ಸಾಕ್ಷ್ಯಗಳನ್ನೂ ನಾಶಪಡಿಸಿದ ಬಳಿಕ ಸರ್ಕಾರದ ಮುಖ್ಯ ಬ್ರೋಕರ್, ಬಿಜೆಪಿ ಮುಖಂಡ ಸ್ಯಾಂಟ್ರೊ ರವಿಯ ಬಂಧನ ನಾಟಕ ನಡೆಸಿದೆ. ಆತನನ್ನು ಗುಜರಾತಿನಲ್ಲಿ ಬಂಧಿಸಲಾಗಿದೆ. ಆತ ಗುಜರಾತಿಗೆ ಹೋಗಿದ್ದು ಹೇಗೆ…? ಎಲ್ಲ ದಂಧೆಕೋರರಿಗೂ ಗುಜರಾತ್ ಪ್ರಿಯವಾಗುವುದೇಕೆ…? ಇದು ಗುಜರಾತ್ ಮಾದರಿಯ ಪ್ರಭಾವವೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ. ಹಾಗೂ `ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಗುಜರಾತ್‍ನ ಅಹಮದಾಬಾದ್‍ಗೆ ತೆರಳಿದ್ದರು. ಸ್ಯಾಂಟ್ರೊ ರವಿಯನ್ನು ಅಹಮದಾಬಾದ್‍ನಲ್ಲೇ ಶುಕ್ರವಾರ ಬಂಧಿಸಲಾಗಿದೆ. ಇದು ಖಂಡಿತಾ ಕಾಕತಾಳೀಯವಲ್ಲ’ ಎಂದು ಟೀಕಿಸಿದೆ.

Leave a Reply

Your email address will not be published. Required fields are marked *

error: Content is protected !!