ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್: ವಿವಿಧ ಬೇಡಿಕೆ ಈಡೇರಿಸಲು ಹಕ್ಕೊತ್ತಾಯ
ಉಡುಪಿ ಜ.13(ಉಡುಪಿ ಟೈಮ್ಸ್ ವರದಿ): ರೈತರ ಆರ್.ಟಿಸಿ(ಪಹಣಿ ಪತ್ರ)ಯ ಕಾಲಮಿತಿಯನ್ನು ಕನಿಷ್ಠ 3 ತಿಂಗಳ ವರೆಗಾದರೂ ವಿಸ್ತರಿಸುವಂತೆ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ರೈತ ಧ್ವನಿ ಸಂಘದ ಸಂಚಾಲಕ ಭಾಸ್ಕರ್ ಶೆಟ್ಟಿ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಆರ್.ಟಿ.ಸಿಯು ರೈತರು ತಾವು ಹೊಂದಿರುವ ಜಮೀನು, ಜಮೀನಿನ ವಿಸ್ತೀರ್ಣ ಹಕ್ಕುಗಳು ಇತ್ಯಾದಿಗಳಿಗೆ ತಾವು ಹೊಂದಿರುವ ಜಮೀನಿನ ಸರ್ವೆ ನಂಬರ್ ನೊಂದಿಗೆ ದಾಖಲಿಸಿಕೊಳ್ಳುವ ರೈತರ ಬಹುಮುಖ್ಯವಾದ ದಾಖಲೆಯಾಗಿದೆ. ಈ ದಾಖಲಾತಿಗೆ ಕನಿಷ್ಠ ಐದು ರೂಪಾಯಿ ವೆಚ್ಚ ತಗುಲುತ್ತದೆ. ಆದರೆ ಸರಕಾರ ಈ ಹಿಂದೆ ಹದಿನೈದು ರೂಪಾಯಿ ನಿಗದಿಪಡಿಸಿತ್ತು. ಇದೀಗ ಮತ್ತೆ ಏಕಾಏಕಿಯಾಗಿ ಹತ್ತು ರೂಪಾಯಿ ಹೆಚ್ಚಿಸಿದೆ. ಈ ಆರ್.ಟಿ.ಸಿಯ ಅವಧಿಯ ಕಾಲಮಿತಿ ಕೇವಲ 15 ದಿನಕ್ಕೆ ಸೀಮಿತ ಆದ್ದರಿಂದ ಈ ಪಹಣಿಪತ್ರದ ಕಾಲಮಿತಿಯನ್ನು ಕನಿಷ್ಟ ಮೂರು ತಿಂಗಳಿಗಾದರೂ ವಿಸ್ತರಿಸುವಂತೆ ಆಗ್ರಹಿಸಿದರು.
ಹಕ್ಕು ಪತ್ರ ವಿತರಣೆ ವಿಚಾರವಾಗಿ ಮಾತನಾಡಿದ ಅವರು, ಕುಮ್ಕಿ, ಕಾಣೆ, ಬಾಣೆ, ಜಮ್ಮ, ಸೊಪ್ಪಿನ ಬೆಟ್ಟದಂತಹ ಕೃಷಿಪೂರಕ ಜಮೀನುಗಳು ಶಾಸನಬದ್ಧ ಹಕ್ಕು ರೈತರಿಗೆ ನೀಡಲು ಮತ್ತು ಈಗಾಗಲೇ ಅರ್ಜಿ ಸಲ್ಲಿಸಿದ ರೈತರಿಗೆ ಶೀಘ್ರವೇ ಹಕ್ಕುಪತ್ರ ನೀಡಬೇಕು ಎಂದರು. ಹಾಗೂ ಈ ಭಾಗದಲ್ಲಿ ಎಲ್ಲಾ ಜನಪ್ರತಿನಿಧಿ ಗಳು ಮತ್ತು ಅವರದ್ದೇ ಸರಕಾರ ಇದ್ದರೂ ಸಹಾ ಸಕಾಲದಲ್ಲಿ ರೈತರ ಸಬ್ಸಿಡಿ ರೈತರ ಖಾತೆಗೆ ಜಮಾ ಆಗುತ್ತಿಲ್ಲ. ಮಾತ್ರವಲ್ಲದೆ ಸಕಾಲದಲ್ಲಿ ಕಟಾವು, ಸಮಯಕ್ಕೆ ಬೆಂಬಲ ಬೆಲೆ ಘೋಷಣೆ ಆಗುತ್ತಿಲ್ಲ. ಇದನ್ನು ಸರಕಾರ ಗಂಭೀರದ ವಿಷಯವಾಗಿ ಏಕೆ ಪರಿಗಣಿಸುತ್ತಿಲ್ಲ. ಈ ಕುರಿತಾಗಿ ರೈತರು ಪ್ರತಿಭಟನೆ ಮಾಡಿದರೂ ರೈತಪರ ಸರಕಾರ ಎಂದು ಘೋಷಿಸುವ ಜನಪ್ರತಿನಿಧಿಗಳ ಕಣ್ಣು ಯಾಕೆ ತೆರೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ವಿದ್ಯುತ್ ಖಾಸಗೀಕರಣದ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಅವರು, ಕೇಂದ್ರ ಸರಕಾರವು ಖಾಸಗಿ ವಿದ್ಯುತ್ ಬಿಲ್ ನ್ನು ಜಾರಿಗೊಳಿಸಲು ಮುಂದಾಗಿದ್ದು, ಈ ಬಗ್ಗೆ ಕೇಂದ್ರ ಸರಕಾರ ಸದ್ಯದಲ್ಲಿ ಉಪಸಮಿತಿಯ ವರದಿಯನ್ನು ಸಂಸತ್ತಿನ ಮುಂದೆ ಮಂಡಿಸಲಿರುವ ಮಾಹಿತಿ ಇದೆ. ಒಂದು ವೇಳೆ ಸರಕಾರ ಇದನ್ನು ಖಾಸಗಿಯವರಿಗೆ ವಹಿಸಿದಲ್ಲಿ ವಿದ್ಯುತ್ ಬಿಲ್ ಯಾವುದಕ್ಕೂ ಉಚಿತವಾಗಿ ರೈತರಿಗೆ ದೊರಕಲಾರದು ಎಂದು ಹೇಳಿದರು.
ಉಡುಪಿ ಜಿಲ್ಲೆ ಸೇರಿದಂತೆ ಅನೇಕ ಕಡೆಗಳಲ್ಲಿ ತೆಂಗು ಕೃಷಿ ಪ್ರಾಮುಖ್ಯತೆಯನ್ನು ಹೊಂದಿದೆ. ಆದರೆ ತೆಂಗು-ಎಳನೀರುಗಳ ನಾಶಕ್ಕೆ ಪರಿಹಾರಗಳನ್ನು ನೀಡಲು ಸರಕಾರದ ಆದೇಶವಿರುವುದಿಲ್ಲ ಹಾಗೂ ಇ-ಪರಿಹಾರ ಎಪ್ಲಿಕೇಶನ್‍ನಲ್ಲಿ ಸಹಾ ಈ ಬಗ್ಗೆ ಮಾಹಿತಿಗಳು ಲಭ್ಯವಿಲ್ಲ ಎಂದು ಉಲ್ಲೇಖವಿದೆ. ತೆಂಗಿನಮರ ನಾಶವಾದರೆ ಪರಿಹಾರ ನೀಡಬಹುದು, ಮಂಗನ ಹಾವಳಿಯಿಂದ ಎಳನೀರು ಹಾನಿಯಾದರೆ ಪರಿಹಾರಕ್ಕೆ ಅವಕಾಶವಿಲ್ಲ ಎನ್ನುತ್ತಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಹಾಗೂ ಉಡುಪಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕನಸಿನ ಯೋಜನೆಯಾದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ರೈತರಿಗೆ ವರದಾನವಾಗ ಬೇಕಾಗಿದ್ದು, ಪಾರದರ್ಶಕ ಆಡಳಿತ ಮೂಲಕ ಸಕ್ಕರೆ ಕಾರ್ಖಾನೆ ರೈತರ ಹಿತದೃಷ್ಟಿಯಿಂದ ಪುನರಾರಂಬಿಸಬೇಕಾಗಿದೆ. ಸರಕಾರ ಈ ವಿಶೇಷವಾಗಿ ಮುನ್ನೂರು ಕೋಟಿ ರೂಪಾಯಿಯನ್ನು ಈ ಬಾರಿಯ ಬಜೆಟ್ ನಲ್ಲಿ ಕಾದಿರಿಸಬೇಕೆಂದು ಮನವಿ ಮಾಡಿಕೊಂಡರು.
ನೀರು ಪೂರೈಕೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ರೈತರಿಗೆ ವರದಾನವಾಗಬೇಕಾಗಿದ್ದ ಕೃಷಿ ಪೂರಕ ಚಟುವಟಿಕೆಯ ವಾರಾಹಿ ನೀರಾವರಿ ಯೋಜನೆಯನ್ನು ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಸಿ 2023ರ ಅಂತ್ಯದೊಳಗೆ ಯೋಜನೆ ಪೂರ್ಣ ಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮನೆ ರಚಿಸಿಕೊಂಡು ಜಾನುವಾರು ಕೊಟ್ಟಿಗೆ ನಿರ್ಮಿಸಿ, ಸಾಗುವಳಿ ಕೃಷಿ ಮಾಡಿಕೊಂಡು ಜೀವನ ಸಾಗಿಸುವ ಕೃಷಿಕರು ಹಾಘೂ ರೈತಾಪಿ ವರ್ಗಕ್ಕೆ ಅಥವಾ ವಾಸ್ತವ್ಯದಾರರಿಗೆ ಈ ತನಕ ಜಮೀನಿನಲ್ಲಿ ಹಕ್ಕುಪತ್ರ ಹೊಂದಲು ಸಾಧ್ಯವಾಗಿಲ್ಲ. ಇದಕ್ಕೆ ಕಸ್ತೂರಿರಂಗನ್ ವರದಿಯು ಅಡ್ಡಿಯಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಆದರೂ ಹಲವು ಕಡೆಗಳಲ್ಲಿ ಸರಕಾರ ಹಕ್ಕು ಪತ್ರವಿತರಿಸುತ್ತಿದೆಯಾದರೂ ಈ ಹಕ್ಕುಪತ್ರದಲ್ಲಿ ಯಾವುದೇ ಸಾಲಸೌಲಭ್ಯಗಳಿಗೆ ಅನ್ವಯವಿಲ್ಲವೆಂಬ ಷರತ್ತಿನಿಂದಾಗಿ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳಲ್ಲಿ ಆರ್ಥಿಕ ಸಾಲ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಹಾಗೂ ಇದೇ ವೇಳೆ ಜ.22 ರಂದು ಉಡುಪಿಯ ಮಿಷನ್ ಕಂಪೌಂಡ್ ಮೈದಾನದಲ್ಲಿ ಕಾಂಗ್ರೇಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕರ್ನಾಟಕ ಸರಕಾರದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರೊಂದಿಗೆ ಮೈಸೂರು ವಿಭಾಗದ ಕೆ.ಪಿ.ಸಿ.ಸಿ.ಉಸ್ತುವಾರಿ ಧೃವ ನಾರಾಯಣ ಹಾಗೂ ರಾಜ್ಯ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೇಗಾ ಮುಂತಾದ ರಾಜ್ಯ ಮಟ್ಟದ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಶಿಧರ್ ಶೆಟ್ಟಿ ಎಲ್ಲೂರು, ಶೇಖರ್ ಕೋಟ್ಯಾನ್, ಹರೀಶ್ ಶೆಟ್ಟಿ, ಸುಂದರ ಶೆಟ್ಟಿಗಾರ್ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.