ಜ.20: “ಶಕಲಕ ಬೂಮ್ ಬೂಮ್” ಚಿತ್ರ ತುಳುನಾಡಿನಾದ್ಯಂತ ತೆರೆಗೆ
ಉಡುಪಿ ಜ.13 (ಉಡುಪಿ ಟೈಮ್ಸ್ ವರದಿ): ಯುಎನ್ ಸಿನೆಮಾಸ್ ಬ್ಯಾನರ್ ನಡಿ ಮೂಡಿಬಂದಿರುವ “ಶಕಲಕ ಬೂಮ್ ಬೂಮ್” ಚಿತ್ರ ತುಳುನಾಡಿನಾದ್ಯಂತ ಜ.20 ತೆರೆಗೆ ಬರುತ್ತಿದೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಚಿತ್ರದ ನಿರ್ಮಾಪಕ ನಿತ್ಯಾನಂದ ನಾಯಕ್ ಅವರು, ಈ ಚಲನಚಿತ್ರವನ್ನು ಶ್ರೀಶ ಎಳ್ಳಾರೆ ಅವರು ನಿರ್ದೇಶಿಸಿದ್ದು, ನಿತ್ಯಾನಂದ ನಾಯಕ್ ನರಸಿಂಗ, ಉಮೇಶ್ ಪ್ರಭು ಮಾಣಿಬೆಟ್ಟು ನಿರ್ಮಾಣ ಮಾಡಿದ್ದಾರೆ. ಡಾಲ್ವಿನ್ ಕೊಳಲಗಿರಿ ಚಿತ್ರದ ಸಂಗೀತ ನಿರ್ದೇಶಕರಾಗಿದ್ದು, ತುಳುನಾಡಿನ ಖ್ಯಾತ ಛಾಯಾಗ್ರಾಹಕ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮೆರಾ ವರ್ಕ್ ಮಾಡಿದ್ದಾರೆ ಎಂದು ತಿಳಿಸಿದರು.
ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ, ಕಥಾನಾಯಕನಾಗಿ ಗಾಡ್ವಿನ್ ಸ್ಟಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ, ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಾಜ್, ಶಿವಾನಂದ, ಯಜ್ಜೆಶ್ ಶೆಟ್ಟಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಹೊಟ್ಟೆ ಹುಣ್ಣಾಗಿಸುವ ಹಾಸ್ಯ ದೃಶ್ಯಗಳು ಇದ್ದು, ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ ಜೊತೆಗೆ ಹೊರರ್, ಥ್ರಿಲ್ಲರ್, ಸಸ್ಪೆನ್ಸ್ ಅಂಶವನ್ನು ನೀಡಲಾಗಿದೆ. ಜನರನ್ನು ಮೋಸ ಮಾಡುತ್ತ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು ಒಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ.
ಆ ಮನೆಯ ರಹಸ್ಯ ಏನು..? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು..? ನ್ಯಾಯ ಗೆಲ್ಲುತ್ತದಾ…? ಸತ್ಯಕ್ಕೆ ಜಯವಿದೆಯಾ…? ಎನ್ನುವ ವಿಶಿಷ್ಟವಾದ ಕಥಾಹಂದರ ಹೊಂದಿರುವ ವಿಭಿನ್ನವಾದ ಚಿತ್ರ ಇದಾಗಿದೆ. ಜ.20 ರಂದು ಬಿಡುಗಡೆಗೊಳ್ಳುವ ಈ ಶಕಲಕ ಬೂಮ್ ಬೂಮ್ ತುಳು ಚಿತ್ರವನ್ನು ಸರ್ವಧರ್ಮ ಕಲಾಭಿಮಾನಿಗಳು ನೋಡಿ ಹರಸಬೇಕು ಎಂದು ಹೇಳಿದರು.
ಇದೇ ವೇಳೆ ಮಾನವ ಜನ್ಮ ಶ್ರೇಷ್ಠವಾದದ್ದು ನಮ್ಮ ಜೀವನದ ನಂತರ ಇತರರನ್ನು ನಾವು ಬದುಕಿರುವಂತೆ ಮಾಡಲು ಸಾಧ್ಯ ಅದಕ್ಕಾಗಿ ಪ್ರತಿಯೊಬ್ಬರು ಇಂದೇ ನಿಮ್ಮ ಚರ್ಮ ಮತ್ತು ಅಂಗಾಂಗಗಳನ್ನು ದಾನ ಮಾಡಿರಿ ಎಂಬ ಸಂದೇಶವನ್ನು ನೀಡಿದ ಅವರು ಅಂಗ ದಾನ ಮಾಡಲು www. jeevasarthakathe. karnataka.gov.in ಲಾಗಿನ್ ಆಗಿ ಇತರರ ಬಾಳಿಗೆ ಬೆಳಕಾಗಿ ಎಂದು ಸಲಹೆ ನೀಡಿದರು.