ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯುವ ಮಧುಮೇಹಿಗಳಿಗೆ ಶೈಕ್ಷಣಿಕ ಕಾರ್ಯಕ್ರಮ
ಮಣಿಪಾಲ ಜ.13 : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ಭಾರತ ಸರ್ಕಾರದ ಅನುದಾನಿತ ಯಂಗ್ ಡಯಾಬಿಟಿಸ್ ರಿಜಿಸ್ಟ್ರಿ ಹಂತ III ಮತ್ತು ವೈದ್ಯಕೀಯ ವಿಭಾಗ, ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ ಇದರ ವತಿಯಿಂದ ಮಕ್ಕಳ ವಿಭಾಗ ಮತ್ತು ಮಕ್ಕಳ ಎಂಡೋಕ್ರೈನಾಲಜಿ ಕ್ಲಿನಿಕ್, ಮಣಿಪಾಲ ಇದರ ಸಹಯೋಗದೊಂದಿಗೆ ಯುವ ಮಧುಮೇಹಿಗಳಿಗಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಈ ವೇಳೆ ಖಾಲಿ ಹೊಟ್ಟೆಯ ರಕ್ತದ ಸಕ್ಕರೆ ಮತ್ತು ಗ್ಲೈಕೇಟೆಡ್ ಹಿಮೋಗ್ಲೋಬಿನ್, ಆಂಥ್ರೊಪೊಮೆಟ್ರಿಕ್ ಮತ್ತು ಪ್ರಮುಖ ನಿಯತಾಂಕಗಳ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಹಾಗೂ ಯೋಗ ಕೇಂದ್ರದ ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ ಮಾಹೆ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗ, ಫಿಸಿಯೋಥೆರಪಿ ವಿಭಾಗ ಮತ್ತು ನೇತ್ರಶಾಸ್ತ್ರ ವಿಭಾಗಗಳ ಸಹಾಯದಿಂದ ಶೈಕ್ಷಣಿಕ ಕಾರ್ಯಕ್ರಮ ನಡೆಸಲಾಯಿತು ಮತ್ತು ನಂತರ ಉಚಿತ ಯೋಗ ಸಮಾಲೋಚನೆ ಹಾಗೂ ಪ್ರದರ್ಶನ, ಸಂಪೂರ್ಣ ವೈಜ್ಞಾನಿಕ ಪೌಷ್ಟಿಕಾಂಶದ ಆಹಾರಕ್ರಮದ ಸಮಾಲೋಚನೆ ಹಾಗೂ ಪ್ರದರ್ಶನ, ಮಧುಮೇಹ ಪಾದದ ಆರೈಕೆಯ ಅರಿವು ಮತ್ತು ಮಧುಮೇಹ ಸಂಬಂಧಿತ ಕಣ್ಣಿನ ತೊಂದರೆಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.
ಅನೇಕ ಯುವ ಮಧುಮೇಹಿಗಳು (2-25 ವರ್ಷ ವಯಸ್ಸಿನವರು) ತಮ್ಮ ಆರೈಕೆದಾರರೊಂದಿಗೆ ಭಾಗವಹಿಸಿದ್ದು, ಯುವ ಮಧುಮೇಹಿಗಳ ಅನುಭವ ಹಾಗೂ ಸ್ಪೂರ್ತಿದಾಯಕ ಮಾತುಗಳು, ಆಯೋಜಿಸಿದ್ದ ಆಟಗಳಲ್ಲಿ ಭಾಗವಹಿಸುವಿಕೆ, ರಸ ಪ್ರಶ್ನೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಇದರ ಭಾಗವಾಗಿತ್ತು.
ಈ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಣಿಪಾಲದ ಕೆಎಂಸಿಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಮತ್ತು ವೈಡಿಆರ್ III ರ ಪ್ರಭಾರಿ ಡಾ.ಶಿವಶಂಕರ ಕೆ.ಎನ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಲೆಸ್ಲಿ ಎಡ್ವರ್ಡ್ ಲೂಯಿಸ್, ಸಹಾಯಕ ಪ್ರಾಧ್ಯಾಪಕರು ಮತ್ತು ಕೆಎಂಸಿ ಮಣಿಪಾಲದ ಮಕ್ಕಳ ಹಾರ್ಮೋನ್ ತಜ್ಞ ಡಾ. ಕೌಶಿಕ್ ಉರಾಳ ಹೆಚ್, ಮಣಿಪಾಲದ ಕೆಎಂಸಿಯ ವೈದ್ಯಕೀಯ ವಿಭಾಗದ ಐ.ಸಿ.ಎಂ.ಆರ್ ವೈ.ಡಿ.ಆರ್ III ರ ಸಂಶೋಧನಾ ಅಧಿಕಾರಿ ಡಾ.ಅಜಿತ್ ಸಿಂಗ್ ಮತ್ತು ಸಂಶೋಧನಾ ಸಹಾಯಕಿ ಜ್ಯೋತಿ ನಾಯ್ಕ ಅವರು ಉಪಸ್ಥಿತರಿದ್ದರು.