ಕಾರ್ಕಳ: ಸ್ವಾಮಿ ವಿವೇಕಾನಂದ ಜಯಂತಿ-ನಾಲ್ವರಿಗೆ ಯುವ ಭಾರತ್ ಪುರಸ್ಕಾರ

ಕಾರ್ಕಳ ಜ.13 : ಮಂಗಳೂರು ವಿಶ್ವವಿದ್ಯಾಲಯ ಮತ್ತು ಮನ್ವಂತರ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಅವರ 160 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವ ಚಿಂತನ ಕಾರ್ಯಕ್ರಮ ಎಸ್.ವಿ.ಟಿ. ವಿದ್ಯಾಸಂಸ್ಥೆಯ ಅಂಡಾರು ವಿಠಲ ರುಕ್ಮಿಣಿ ಕಿಣಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕ, ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು, ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬ ವಿವೇಕಾನಂದರ ಮಾತು ಸಾರ್ವಕಾಲಿಕ ಸತ್ಯ. ರಾಷ್ಟ್ರ ಕಟ್ಟುವ ಕಾರ್ಯವೇ ನಮ್ಮ ಜೀವನದ ಗುರಿಯಾಗಿರಬೇಕು. ಸ್ವಾಮಿ ವಿವೇಕಾನಂದರೇ ಈ ನಿಟ್ಟಿನಲ್ಲಿ ನಮಗೆ ಪ್ರೇರಣೆ. ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿ, ಪ್ರೇರಕ ಶಕ್ತಿ. ಯುವಕರು ಅವರ ಜೀವನ, ಬೋಧನೆ ಅರಿಯಬೇಕು ಎಂದರು.

ಶಿಕ್ಷಣದೊಂದಿಗೆ ಮಹಿಳಾ ಸಬಲೀಕರಣ ಸಾಧ್ಯವೆಂದು ವಿವೇಕಾನಂದರು ತಿಳಿಸಿದ್ದರು. ಮಹಿಳೆಯರಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯದ ಕಿಡಿ ಹಚ್ಚಿದ್ದರು. ಆದರೆ ಇಂದಿನ ದಿನಗಳಲ್ಲಿ 28ರ ವಯಸ್ಸಿ ಯುವಜನತೆ ಬದುಕುವ ಧೈರ್ಯ ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗದೆ ಹೇಡಿಗಳಂತೆ ಓಡುತ್ತಿರುವುದು ದುರಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ವಿವೇಕಾನಂದರು ವಿಶ್ವಮಾನ್ಯರಾದರು. ಇದಕ್ಕೆ ಪ್ರಮುಖ ಕಾರಣ ಅವರ ಜೀವನದ ಧನಾತ್ಮಕ ಚಿಂತನೆ, ವಿಶ್ವದ ಅನೇಕ ರಾಷ್ಟ್ರಗಳು ವಿದೇಶಿಯರ ಆಕ್ರಮಣದ ಸಂದರ್ಭ ಕುಗ್ಗಿ ಅವಸಾನಗೊಂಡಿದೆ. ಆದರೆ, ಭಾರತಕ್ಕೆ ಅದೆಷ್ಟೋ ಬಾರಿ ದಾಳಿಯಾಗಿದ್ದರೂ ಭಾರತ ಬಲಿಷ್ಠವಾಗಿ ನಿಂತಿದೆ. ಇದು ನಮ್ಮ ದೇಶದ ನಿಜವಾದ ಶಕ್ತಿ. ಆದರೆ ಪ್ರಸ್ತುತ ಈ ಸಾಮಥ್ರ್ಯ, ಶಕ್ತಿ ದುರ್ಬಲವಾಗುತ್ತಿರುವುದು ವಿಪರ್ಯಾಸ ಎಂದು ಅವರು ಖೇದ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರಿಗೆ ವಿವೇಕಾನಂದರೇ ಪ್ರೇರಣೆ ಎನ್ನುತ್ತಾರೆ. ವಿವೇಕಾನಂದರ ಕನಸಿನ ಭಾರತದಂತೆ ದೇಶವಿಂದು ರೂಪುಗೊಳ್ಳುತ್ತಿದೆ. ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೊರೋನಾ ಸಂದರ್ಭ ತತ್ತರಿಸಿದ ಅನೇಕ ಬಡ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಇದು ಇಂದಿನ ಭಾರತವೆಂದು ಅವರು ಇದೇ ವೇಳೆ ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಅವರು ಮಾತನಾಡಿ, ವಿಶ್ವಮಟ್ಟದಲ್ಲಿ ಭಾರತದ ಗುರುತಿಸುವಿಕೆ ಮೊದಲಾಗಿ ವಿವೇಕಾನಂದರ ಕೊಡುಗೆ, ಅಂತಹ ದಾರ್ಶನಿಕ ವ್ಯಕ್ತಿತ್ವದ ಜೀವನ ಬೋಧನೆ ಪ್ರಸ್ತುತ ಯುವಜನತೆಗೆ ಅವಶ್ಯ. ಅದುವೇ ಅವರ ಬಹುದೊಡ್ಡ ಶಕ್ತಿ ಎಂದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಹೆಬ್ರಿ ಎನ್. ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಶೆಟ್ಟಿ, ಅಂತರಾಷ್ಟ್ರೀಯ ಈಜು ಪಟು ವಿಜೇತಾ ಪೈ, ಲ್ಯಾಂಪ್ಸ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ ಶೆಟ್ಟಿ ಹಾಗೂ ಛತ್ರಪತಿ ಫೌಂಡೇಶನ್ ನ ಸಂಸ್ಥಾಪಕ ಗಿರೀಶ್ ರಾವ್ ಅವರನ್ನು ಯುವ ಭಾರತ್ ಪುರಸ್ಕಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಎಸ್.ವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಕೆ.ಪಿ. ಶೆಣೈ, ಉದ್ಯಮಿ ನಿತ್ಯಾನಂದ ಪೈ, ಮನ್ವಂತರ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಅಭಿಷೇಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಹೆಚ್. ಆಶೀಸ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷ ಸುಹಾಸ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!