ತೆಂಗಿನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆವರೆಗೆ ಕೊಂಡೊಯ್ಯುವಲ್ಲಿ ಹೆಚ್ಚಿನ ಅಧ್ಯಯನ ಅಗತ್ಯ: ಶೋಭಾ ಕರಂದ್ಲಾಜೆ
ಕುಂದಾಪುರ ಜ.13 : ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಬಗ್ಗೆ ಬೆಳೆಗಾರರು ಚಿಂತಿಸದಿದ್ದರೆ, ತೆಂಗಿನ ಕೃಷಿಯನ್ನು ಲಾಭದಾಯವಾಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.
ಉಡುಪಿ ಜಿಪಂ, ತೋಟಗಾರಿಕಾ ಇಲಾಖೆ, ತೆಂಗು ಅಭಿವೃದ್ಧಿ ಮಂಡಳಿ ಕೊಚ್ಚಿ ಹಾಗೂ ಉಕಾಸ ಉತ್ಪಾದಕರ ಕಂಪೆನಿ ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ತಲ್ಲೂರಿನ ಶೇಷಕೃಷ್ಣ ಕನ್ವೆನ್ಶನ್ ಹಾಲ್‍ನಲ್ಲಿ ನಡೆದ ತೆಂಗು ಅಭಿವೃದ್ಧಿ ಮಂಡಳಿಯ ಸಂಸ್ಥಾಪನಾ ದಿನಾಚರಣೆ ಹಾಗೂ ರೈತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶ ತೆಂಗಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ, ತೆಂಗಿನ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆವರೆಗೆ ಕೊಂಡೊಯ್ಯುವಲ್ಲಿ ಬೆಳೆಗಾರರು ಹಿಂದೆಬಿದ್ದಿದ್ದಾರೆ. ಈ ಬಗ್ಗೆ ರೈತರು ಹೆಚ್ಚಿನ ಅಧ್ಯಯನ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ದೇಶದ 22 ರಾಜ್ಯಗಳಲ್ಲಿ 22 ಲಕ್ಷ ಮಂದಿ ತೆಂಗು ಬೆಳೆಯನ್ನು ಅವಲಂಬಿಸಿದ್ದು, ಆದರೆ ಈ ಪೈಕಿ ಎಷ್ಟು ಮಂದಿ ಇದನ್ನು ವಾಣಿಜ್ಯ ಬೆಳೆಯಾಗಿ ಪರಿಗಣಿಸಿದ್ದಾರೆ ಅನ್ನುವುದು ಬಹಳ ಮುಖ್ಯ. ಕೇಂದ್ರ ಸರಕಾರ ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ನಿಟ್ಟಿನಲ್ಲಿ ರಫ್ತಿಗಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ಸ್ಥಳೀಯವಾಗಿಯೂ ತೆಂಗಿನ ಮೌಲ್ಯವರ್ಧನೆ ಸಾಧ್ಯವಿದ್ದು, ಉಕಾಸದವರ ಕಲ್ಪರಸವೇ ಇದಕ್ಕೊಂದು ಉತ್ತಮ ಉದಾಹರಣೆ ಎಂದು ಶ್ಲಾಘಿಸಿದರು. ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಆದ್ಯತೆ ನೀಡಿ, ರಾಸಾಯನಿಕ ಬಳಕೆ ಮಿತಗೊಳಿಸಿ, ಸಾವಯವ ಕೃಷಿಗೆ ಒತ್ತು ನೀಡುವ ಕೆಲಸಗಳು ಆಗಬೇಕು. ಸ್ಥಳೀಯ ಯೋಜನೆಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಕಾದಿರಿಸಿದ ಒಂದು ಲಕ್ಷ ಕೋಟಿ ಅನುದಾನದ ಸದ್ಭಳಕೆ ಆಗಬೇಕಾಗಿದೆ. ಆಹಾರ ಪದಾರ್ಥಗಳನ್ನು ರಫ್ತು ಮಾಡಲು ವಿಫುಲ ಅವಕಾಶವಿದ್ದು ಅದರ ಸದುಪಯೋಗವಾಗಬೇಕು ಎಂದು ಸಚಿವೆ ಹೇಳಿದರು.
ಕೇರಳ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಲ, ಒರಿಸ್ಸಾದಂತಹ ಕರಾವಳಿ ತೀರ ಪ್ರದೇಶವನ್ನು ಹೊಂದಿರುವ ರಾಜ್ಯಗಳ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ತೆಂಗು ಬೆಳೆಗಾರರ ಆದಾಯವನ್ನು ದ್ವಿಗುಣಗೊಳಿಸಬೇಕು ಎನ್ನುವ ಚಿಂತನೆಗಳು ಕೇಂದ್ರ ಸರ್ಕಾರದ ಮುಂದಿದೆ. ಬೇಡಿಕೆಗೆ ಸರಿಯಾದ ಉತ್ಪಾದನೆಗಳು ಆಗುತ್ತಿಲ್ಲ. ಕೇರಳ ಹಾಗೂ ತಮಿಳುನಾಡಿನಲ್ಲಿ ಕೃಷಿ ಉತ್ಪಾದಕರ ಸಂಘ, ಸೊಸೈಟಿ ಹಾಗೂ ಕಂಪೆನಿಗಳು ಲಾಭದಾಯಕವಾಗಿ ಪ್ರಗತಿ ಸಾಧಿಸಿದ್ದು ಕರ್ನಾಟದಲ್ಲಿಯೂ ಈ ಬೆಳವಣಿಗೆ ಆಗಬೇಕು ಎಂದರು.
ಈ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಮಾತನಾಡಿ, ನಮ್ಮ ತೆಂಗಿನ ಉತ್ಪನ್ನಗಳ ಬಗ್ಗೆ ನಾವೇ ಆಸಕ್ತಿಯನ್ನು ಕಳೆದು ಕೊಂಡಿದ್ದೇವೆ. ತೆಂಗಿನ ಎಣ್ಣೆಯನ್ನು ಬಳಸಲು ಆದ್ಯತೆ ನೀಡುವ ಬದಲಾಗಿ ಅದಕ್ಕೆ ಸಮಾನಾದ ಇತರೆ ತೈಲಗಳನ್ನು ಬಳಸುತ್ತಿದ್ದೇವೆ. ನಾವೇ ನಮ್ಮ ತೆಂಗಿನ ಉತ್ಪನ್ನಗಳನ್ನು ಬಳಸದಿದ್ದರೆ ಉತ್ತೇಜನ ಸಿಗಲು ಅಸಾಧ್ಯ. ತೆಂಗು ಹಾಗೂ ಅದರ ಉತ್ಪನ್ನಗಳ ಬಗ್ಗೆ ನಾವೇ ಹೆಚ್ಚು ಬಳಸುವುದರಿಂದ ಮೌಲ್ಯವರ್ಧನೆ, ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಇದೇ ವೇಳೆ ಕೊಚ್ಚಿ ತೆಂಗು ಅಭಿವೃದ್ಧಿ ಮಂಡಳಿಯ ಮುಖ್ಯ ತೆಂಗು ಅಭಿವೃದ್ಧಿ ಅಧಿಕಾರಿ ಡಾ.ಬಿ.ಹನುಮಂತೇ ಗೌಡ ಅವರು ಮಾತನಾಡಿ, 1981ರಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಆರಂಭವಾದಾಗ 40 ಸಾವಿರ ಹೆಕ್ಟೇರ್ ತೆಂಗು ಪ್ರದೇಶವಿದ್ದರೆ, ಈಗ ಅದು 22 ಲಕ್ಷ ಹೆಕ್ಟೇರ್‍ಗೆ ವಿಸ್ತರಣೆಯಾಗಿದೆ. ಕರ್ನಾಟಕ, ತಮಿಳುನಾಡು, ಕೇರಳದಂತಹ ರಾಜ್ಯಗಳೇ ದೇಶದ ಶೇ.90ರಷ್ಟು ತೆಂಗಿನ ಬೆಳೆಯನ್ನು ಹೊಂದಿವೆ. ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದರೂ, ಮಾರುಕಟ್ಟೆಯಲ್ಲಿ ಮಾತ್ರ ಹಿಂದುಳಿದಿದ್ದೇವೆ ಎಂದರು.
ಉಡುಪಿ ಕಲ್ಪರಸ ಕೊಕೊನಟ್ ಮತ್ತು ಆಲ್‍ಸ್ಪೈಸಸ್ ಪ್ರೊಡ್ಯೂಸರ್ ಕಂಪೆನಿ ಕುಂದಾಪುರ ಇದರ ಸತ್ಯನಾರಾಯಣ ಉಡುಪ ಅವರು ಮಾತನಾಡಿ, ಕಲ್ಪರಸದ ಮೂಲಕ ತೆಂಗಿನ ಮರದಿಂದ ಉತ್ತಮ ಆದಾಯ ಗಳಿಸ ಬಹುದಾಗಿದೆ. ಸಾಕಷ್ಟು ಸವಾಲುಗಳ ನಡುವೆಯೇ ತೆಂಗು ಅಭಿವೃದ್ಧಿ ಮಂಡಳಿ ಇದರ ನೆರವಿಗೆ ಬರಬೇಕು. ತೆಂಗು ಬೆಳೆಗಾರರ ಆರ್ಥಿಕ ಸಂಕಷ್ಟಕ್ಕೆ ಸರಕಾರ ಪರಿಹಾರ ಒದಗಿಸುವಲ್ಲಿ ಕ್ರಮಕೈಗೊಳ್ಳಬೇಕು. ತೆಂಗಿನ ಮೌಲ್ಯ ವರ್ಧನೆಗೆ ಉತ್ತೇಜನ ನೀಡಿದಲ್ಲಿ ತೆಂಗು ಬೆಳೆಗಾರ ಸದೃಢವಾಗಲು ಸಾಧ್ಯವಿದೆ ಎಂದು ಹೇಳಿದ್ದಾರೆ.
ಈ ವೇಳೆ ತೆಂಗಿನ ಬೆಳೆಯ ಆಧುನಿಕ ಬೇಸಾಯ ಕ್ರಮ, ತೆಂಗಿನ ತೋಟದಲ್ಲಿ ಅಂತರ್ ಬೆಳೆ, ತೆಂಗಿನ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ, ತೆಂಗಿನ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ಕಲ್ಪರಸ ಯಶೋಗಾಥೆ ಕುರಿತು ಬೆಳೆಗಾರರಿಗೆ ವಿಜ್ಞಾನಿಗಳಿಂದ ಸಮಾವೇಶ ನಡೆಯಿತು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಎಚ್.ಆರ್. ನಾಯ್ಕ್, ಭಾಕಿಸಂನ ನವನೀತಚಂದ್ರ ಜೈನ್, ಉಕಾಸದ ಸತ್ಯನಾರಾಯಣ ಉಡುಪ ಜಪ್ತಿ, ಹಾಪ್‍ಕಾಮ್ಸ್‍ನ ಸೀತಾರಾಮ ಗಾಣಿಗ, ಕೆವಿಕೆ ಬ್ರಹ್ಮಾವರದ ಹಿರಿಯ ವಿಜ್ಞಾನಿ ಡಾ.ಧನಂಜಯ್, ಕಾಸರಗೋಡು ಸಿಪಿಸಿಆರ್‍ಐನ ಸಸ್ಯ ರೋಗಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ವಿನಾಯಕ ಹೆಗ್ಡೆ, ಸಸ್ಯ ಶರೀರಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಹೆಬ್ಬಾರ್ ಕೆ.ಬಿ., ತೆಂಗು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಡಾ.ಅರಾವಳಿ, ತೋಟಗಾರಿಕಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.