ಸ್ಯಾಂಟ್ರೊ ರವಿ ಸುಳಿವು ಸಿಕ್ಕಿದೆ, ಶೀಘ್ರದಲ್ಲೆ ಬಂಧಿಸುತ್ತೇವೆ: ನಗರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
ಉಡುಪಿ ಜ.13(ಉಡುಪಿ ಟೈಮ್ಸ್ ವರದಿ) : ಸ್ಯಾಂಟ್ರೋ ರವಿ ಯಾವ ಬಿಲದಲ್ಲಿ ಹೊಕ್ಕಿದ್ದರು ಬಿಡೋದಿಲ್ಲ, ಒಂದೆರಡು ದಿನಗಳಲ್ಲಿ ಆತನನ್ನು ಬಂಧಿಸಲಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಇಂದು ಸ್ಯಾಂಟ್ರೋ ರವಿ ಬಂಧನ ವಿಳಂಬ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪೊಲೀಸರು ಕಾರ್ಯಾಚರಣೆ ಮಾಡ್ತಾ ಇದ್ದಾರೆ. ಆತನ ಬಗ್ಗೆ ಸುಳಿವು ಸಿಕ್ತಾ ಇದೆ ಶೀಘ್ರ ಬಂಧನವಾಗುತ್ತದೆ. ಇರೋದ್ರಲ್ಲಿ ಆತ ಸ್ವಲ್ಪ ಬುದ್ಧಿವಂತ ಹಾಗಾಗಿ ಪದೇ ಪದೇ ಸ್ಥಳ ಬದಲಾಯಿಸುತ್ತಿರುತ್ತಾನೆ. ಆತ ಎಲ್ಲಿದ್ದರೂ ಬಿಡಲ್ಲ ಕಾನೂನು ಕ್ರಮ ಆಗೆ ಆಗುತ್ತೆ ಎಂದು ಭರವಸೆ ನೀಡಿದರು.
ಸ್ಯಾಂಟ್ರೋ ರವಿ ಜೊತೆಗಿನ ತಮ್ಮ ಫೋಟೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮದು ಒಂಥರಾ ಸಿನಿಮಾ ನಟರ ಗ್ರೇಡ್ ಆಗಿದೆ. ಜನ ಪ್ರೀತಿಯಿಂದ ಹತ್ತಿರಬಂದು ಫೋಟೋ ತೆಗೆಸಿಕೊಳ್ಳುತ್ತಾರೆ. ಫೋಟೋ ತೆಗೆಸಿಕೊಳ್ಳುವವರಿಗೆ ಬೇಡ ಎನ್ನಲಾಗುವುದಿಲ್ಲ. ಆದರೆ ಈಗಲೂ ಕೂಡ ಸ್ಯಾಂಟ್ರೋ ರವಿ ಎದುರು ಬಂದು ನಿಂತರೆ ನನಗೆ ಗುರುತಿಸಲು ಆಗಲ್ಲ. ಆತನೂ ಕೂಡಾ ನನ್ನ ಜೊತೆ ಫೋಟೋ ತೆಗೆಸಿಕೊಂಡಿರಬಹುದು. ಆತ ಯಾರ್ಯಾರ್ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ ಏನು ವ್ಯವಹಾರ ಅವನದ್ದು ಎಂದು ಆತ ಬಾಯ್ ಬಿಟ್ ಮೇಲೆ ಗೊತ್ತಾಗುತ್ತೆ ಎಂದರು.
ಹಾಗೂ ಆತ ಇಪ್ಪತ್ತು ವರ್ಷದಿಂದ ಈ ಕೆಲಸ ಮಾಡ್ತಾ ಇದ್ದಾನೆ. ಮೈಸೂರಲ್ಲಿ ಆತನ ವಿರುದ್ಧ ರೌಡಿ ಲಿಸ್ಟ್ ಇದೆ. ಆತನ ವಿರುದ್ಧ ಗೂಂಡಾ ಆಕ್ಟ್ ಕೂಡ ಹಾಕಿದ್ದರು ಎಂದು ಹೇಳಿದರು.
ಇದೇ ವೇಳೆ ಮಂಗಳೂರು ಪೊಲೀಸರಿಂದ ಡ್ರಗ್ಸ್ ದಂಧೆ ಬಯಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಡ್ರಗ್ಸ್ ಮುಕ್ತ ಕರ್ನಾಟಕ ನಮ್ಮ ಸರ್ಕಾರದ ಆದ್ಯತೆ. ಮಂಗಳೂರು ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಿದ್ದಾರೆ. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ರವಾನೆಯಾಗಿದೆ.
ಬಂಧಿತರಲ್ಲಿ ಐದಾರು ವರ್ಷಗಳಿಂದ ತೇರ್ಗಡೆ ಯಾಗದೆ ಇಲ್ಲೇ ಉಳಿದಿದ್ದ ಒಬ್ಬ ಅಮೆರಿಕನ್ ಪ್ರಜೆ ಕೂಡ ಇದ್ದಾನೆ. ಆತನನ್ನು ಕೂಡ ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ಡ್ರಗ್ಸ್ ವಿಚಾರದಲ್ಲಿ ಯಾರು ಸಿಕ್ಕರೂ ಬಿಡುವುದಿಲ್ಲ. ಡ್ರಗ್ಸ್ ಸೇವಿಸಿದವರು ಪೆಡ್ಲರ್ ಗಳು ಎಲ್ಲರ ವಿರುದ್ಧವು ಕಾನೂನು ಕ್ರಮ ಜರುಗಿಸುತ್ತೇವೆ. ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಹಾಗೂ ಮೆಡಿಕಲ್ ವಿದ್ಯಾರ್ಥಿಗಳು, ಮೆಡಿಕಲ್ ಪ್ರೊಫೆಸರ್ ಗಳು, ವಿದ್ಯಾವಂತರೆ ಈ ರೀತಿ ಮಾಡಿದರೆ ಏನು ಮಾಡೋಕೆ ಸಾಧ್ಯ ? ಎಂದ ಅವರು ಇದು ಎಲ್ಲಿಗೆ ಹೋಗಿ ಮುಟ್ಟುತ್ತೆ ಗೊತ್ತಿಲ್ಲ ಈ ಪ್ರಕರಣದಲ್ಲಿ ಇನ್ನು ಕೂಡ ಬಹಳ ಜನ ಬಂಧಿತರಾಗಬಹುದು ಎಂದು ಹೇಳಿದರು.