ಕೃಷ್ಣಾ… ಕೃಷ್ಣಾ…ಹಿಂದೆಂದೂ ಕಂಡು ಕೇಳರಿಯದ ಮಳೆ :ವರುಣ ಆರ್ಭಟಕ್ಕೆ ನಲುಗಿದ ಉಡುಪಿ
ಉಡುಪಿ (ಉಡುಪಿ ಟೈಮ್ಸ್ ವರದಿ) : ಹಿಂದೆದೂ ಕಂಡರಿಯದ ಮಹಾ ಮಳೆಗೆ ಕೃಷ್ಣ ನಗರಿ ತತ್ತರಿಸಿದೆ. ಉತ್ತರೆಯ ಆರ್ಭಟಕ್ಕೆ ಉಡುಪಿ ತತ್ತರಗೊಂಡಿದೆ. ನಿನ್ನೆಯಿಂದ ಸುರಿದ ಎಡೆ ಬಿಡದ ಮಳೆ ಜನರನ್ನು ದಿಕ್ಕುಗೆಡಿಸಿದೆ.ಜನ ,ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವಲ್ಲಿ ಮುಂಜಾನೆಯಿಂದ ಸ್ಥಳೀಯರು ,ಎನ್‌ಡಿಆರ್‌ಎಫ್ ಸಿಬ್ಬಂದಿಯವರು ಶ್ರಮ ಪಡುತ್ತಿದ್ದಾರೆ. ದೋಣಿ ,ತೆಪ್ಪ, ಕ್ರೈನ್ ಹೀಗೆ ಬಳಸಿ ತಮ್ಮ ಜೀವದ ಹಂಗು ತೊರೆದು ಜನರನ್ನ ರಕ್ಷಿಸುತ್ತಿದ್ದಾರೆ. ಸುರಿಯುತ್ತಿರುವ ಮಹಾಮಳೆಗೆ ಉಡುಪಿ ಜಿಲ್ಲೆ ನಲುಗಿ ಹೋಗಿದೆ. ಉಡುಪಿಯ ಹಲವು ಬಡಾವಣೆಗಳು ದ್ವೀಪದಂತಾಗಿದ್ದು, ಭಾಗಶಃ ಮುಳುಗಡೆಯಾಗಿವೆ.
ಶನಿವಾರ ಮಧ್ಯಾಹ್ನ ಆರಂಭವಾದ ಮಳೆ ಬಿಡುವಿಲ್ಲದೆ ಸುರಿದ ಪರಿಣಾಮ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತವಾಗಿವೆ. ಮನೆಗಳಿಂದ ಹೊರಗೆ ಬರಲಾಗದೆ ಸಾರ್ವಜನಿಕರು ಜಲದಿಗ್ಬಂಧನದಲ್ಲಿ ಸಿಲುಕಿದ್ದರು.
ಮಧ್ಯರಾತ್ರಿ ಅಗ್ನಿಶಾಮಕ ದಳದ ಸಿಬ್ಬಂದಿ, ಕೋಸ್ಟ್‌ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು. ಭಾನುವಾರ ಬೆಳಿಗ್ಗೆ ಮಂಗಳೂರಿನಿಂದ ಬಂದ ಎನ್‌ಡಿಆರ್‌ಎಫ್ ತಂಡ ನೆರೆಯಲ್ಲಿ ಸಿಲುಕಿದ್ದ 785 ಕುಟುಂಬಗಳ 2,874 ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತು. ಜಿಲ್ಲೆಯಲ್ಲಿ 1,201 ಜನರಿಗೆ ಜಿಲ್ಲಾಡಳಿತ ಊಟ ಹಾಗೂ ವಾಸ್ತವ್ಯ ವ್ಯವಸ್ಥೆ ಮಾಡಿದೆ.
ಸ್ವರ್ಣಾ, ಸೀತಾ, ಪುತ್ತಿಗೆ ಹೊಳೆ, ಮಡಿಸಾಲು, ಎಣ್ಣೆಹೊಳೆ, ಶಾಂಭವಿ ನದಿ ತುಂಬಿ ಹರಿಯುತ್ತಿದ್ದು ಉಡುಪಿ– ಶಿವಮೊಗ್ಗ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ 169 ‘ಎ’ ರಾಷ್ಟ್ರೀಯ ಹೆದ್ದಾರಿ ಕೆಲಕಾಲ ಬಂದ್ ಆಗಿತ್ತು. ಉಡುಪಿಯ ಕೃಷ್ಣಮಠ ಹಾಗೂ ಹಿರಿಯಡ್ಕ ಸಮೀಪದ ಪುತ್ತಿಗೆ ಮಠ ಜಲಾವೃತಗೊಂಡಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ..
ರಾಜ್ಯದಲ್ಲೇ ಗರಿಷ್ಠ ಮಳೆ ಇಂದು ಉಡುಪಿ ತಾಲೂಕಿನ ಐರೋಡಿಯಲ್ಲಿ ಆಗಿದೆ 44.9 ಸೆಂ.ಮೀ ಮಳೆ ಇಲ್ಲಿ ಬಿದ್ದಿದೆ. ಬ್ರಹ್ಮಾವರದಲ್ಲಿ 35.2, ಉಡುಪಿಯಲ್ಲಿ 42.2, ಕಾಪುವಿನಲ್ಲಿ 33.6 ಹಾಗೂ ಕಾರ್ಕಳದಲ್ಲಿ 25.4 ಸೆಂ.ಮೀ ಮಳೆಯಾಗಿದೆ.
ಕೃಷ್ಣನನ್ನು ಕಾಡಿದ ಉತ್ತರೆ: ನಿನ್ನೆಯಿಂದ ಸುರಿದ ಭಾರಿ ಮಳೆ ಕೃಷ್ಣ ಮಠಕ್ಕೆ ರಥಬೀದಿ ನುಗ್ಗಿದ್ದು, ಮಠದ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾದ ವಾಹನಗಳು ನೀರಿನಿಂದ ತುಂಬಿ ತೇಲತೊಡಗಿತು.
ನಗರಕ್ಕೆ ನೀರು ಪೂರೈಕೆ ಸ್ಥಗಿತ: ಉಡುಪಿ ನಗರಕ್ಕೆ ನೀರು ಪೂರೈಸುವ ಬಜೆ ಕಿರು ಜಲಾಶಯ ತುಂಬಿದ್ದು ಪಂಪ್ ಲಿ ನೀರು ಎತ್ತಲು ಸಾಧ್ಯವಾಗದೆ ಸದ್ಯಕ್ಕೆ ನಗರಕ್ಕೆ ನೀರು ಪೂರೈಕೆ ನಿಲ್ಲಿಸಲಾಗಿದೆ. ಜಲಾಶಯದ ಕಿರು ವಿದ್ಯುತ್ ಸ್ಥಾವರದಲ್ಲಿ ಸಿಲುಕಿದ್ದ ಇಬ್ಬರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ