ಹೆಚ್ಚುತ್ತಿದೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ- 3 ತಿಂಗಳಲ್ಲಿ 10 ಕ್ಕೂ ಅಧಿಕ ಮಕ್ಕಳು ಬಲಿ

ಬೆಂಗಳೂರು ಜ.11 : ಇತ್ತೀಚಿನ ಕೆಲ ತಿಂಗಳಲ್ಲಿ ವಿದ್ಯಾರ್ಥಿಗಳು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದ್ದು ಸಹಜವಾಗಿಯೇ ಆತಂಕ ಸೃಷ್ಟಿಸುತ್ತಿದೆ.

ಇದೀಗ ಕಳೆದ ಮೂರು ತಿಂಗಳ ಅಂತರದಲ್ಲಿ ರಾಜ್ಯದಲ್ಲಿ ಹತ್ತಕ್ಕಿಂತ ಅಧಿಕ ವಿದ್ಯಾರ್ಥಿಗಳು ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿರುವ ಅಘಾತಕಾರಿ ಅಂಕಿ ಅಂಶ ಬೆಳಕಿಗೆ ಬಂದಿದೆ.

ಯಾವುದೇ ರೋಗ ಇಲ್ಲದೆ ಸಹಜವಾಗಿಯೇ ಇರುತ್ತಿದ್ದ ವಿದ್ಯಾರ್ಥಿಗಳು ಹಠಾತ್ತನೆ ಎದೆ ನೋವು ಕಾಣಿಸಿಕೊಂಡು ಮೃತಪಟ್ಟಿರುವುದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಎಳೆ ವಯಸ್ಸಿನಲ್ಲಿ ಉಂಟಾಗುತ್ತಿರುವ ಸಾವು ನೋವುಗಳಿಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಒಂದೆಡೆ ಎರಡು ವರ್ಷಗಳ ಹಿಂದೆ ಕೋವಿಡ್ ಕಾರಣಕ್ಕೆ ಹಾಕಿಸಿಕೊಂಡ ಲಸಿಕೆಯ ಪರಿಣಾಮದಿಂದ ಇದು ಸಂಭವಿಸುತ್ತಿದೆಯಾ ಎಂಬ ಶಂಕೆ ಹಲವರು ವ್ಯಕ್ತಪಡಿಸುತ್ತಿದ್ದರೆ. ಮತ್ತೊಂದೆಡೆ ಇತ್ತೀಚಿನ ಬದಲಾದ ಫಾಸ್ಟ್ ಫುಡ್ ಸಂಸ್ಕೃತಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಈ ರೀತಿ ಘಟನೆಗೆ ಕಾರಣವಾಗುತ್ತಿದೆಯೇ ಎಂಬ ಅನುಮಾನಗಳೂ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ಎರಡು ದಿನಗಳ ಹಿಂದೆಯಷ್ಟೇ ಮಂಗಳೂರಿನ ಕೃಷ್ಣಾಪುರದ ನಿವಾಸಿ 9ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಹಾಶಿನ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಣ್ಣೆಕೊಪ್ಪ ಗ್ರಾಮದ ಜಯಂತ್ ರಜತಾದ್ರಯ್ಯ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

ಆನವಟ್ಟಿ ಜೂನಿಯರ್ ಕಾಲೇಜು ನಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಜಯಂತ್ ಬೆಳಿಗ್ಗೆ ಶಾಲೆಗೆ ಹೊರಡಲು ನಿಂತಿದ್ದ ವೇಳೆ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದು, ಇದಕ್ಕೂ ಮೊದಲು ಮಡಿಕೇರಿಯ ಕುಡುಮಗಳೂರಿನ 12 ವರ್ಷದ ಕೀರ್ತನ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಇವರು ಮಾತ್ರವಲ್ಲದೆ ಮೂಡಿಗೆರೆಯ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ, ಸುಳ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೋಕ್ಷಿತ್, ಬೆಳ್ತಂಗಡಿ ನೆರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಚಿನ್ ಹೀಗೆ ಸಾಲು ಸಾಲು ವಿದ್ಯಾರ್ಥಿಗಳು ಹೃದಯಾಘಾತಕ್ಕೆ ತುತ್ತಾಗಿ ಬಲಿಯಾಗುತ್ತಿರುವುದು ಇದೀಗ ಪೋಷಕರಲ್ಲಿ ಆತಂಕ ಉಂಟು ಮಾಡಿದೆ.

Leave a Reply

Your email address will not be published. Required fields are marked *

error: Content is protected !!