ಪಾದಯಾತ್ರೆ ಕೇವಲ ನಿಗಮ ಸ್ಥಾಪನೆಗಾಗಿ ಅಲ್ಲ, 10 ಬೇಡಿಕೆಗಳ ಈಡೇರಿಕೆಗಾಗಿ – ಡಾ. ಪ್ರಣವಾನಂದ ಸ್ವಾಮೀಜಿ
ಬ್ರಹ್ಮಾವರ ಜ.12 : ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದವರೂ ಸಾಕಷ್ಟು ಬಾರಿ ನಿಗಮ ಸ್ಥಾಪನೆಯ ಭರವಸೆ ಕೊಟ್ಟಿದ್ದಾರೆ. ಆದರೆ ಪಾದಯಾತ್ರೆ ಕೇವಲ ನಿಗಮ ಸ್ಥಾಪನೆಗೆ ಸಂಬಂಧಿಸಿದ್ದು ಮಾತ್ರ ಅಲ್ಲ, 10 ಬೇಡಿಕೆಗಳ ಈಡೇರಿಕೆಗಾಗಿ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.
ಸ್ವಾಮೀಜಿ ನೇತೃತ್ವದ ಪಾದಯಾತ್ರೆ ಇಂದು ಬ್ರಜ್ಮಾವರ ತಲುಪಿದೆ. ಈ ವೇಳೆ ಬ್ರಹ್ಮಾವರದಲ್ಲಿನ ನಾರಾಯಣಗುರು ಸಭಾಭವನದಲ್ಲಿ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಚಿವ ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿಗಳು ನಾರಾಯಣಗುರು ನಿಗಮವನ್ನು ಬಜೆಟ್ ನಲ್ಲಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಇದು ಬರೀ ಭರವಸೆ ಮಾತ್ರ. ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ ಸ್ವಾಭಿಮಾನ ಇದ್ದರೆ, ಸಮುದಾಯದ ಬಗ್ಗೆ ಕಳಕಳಿ ಇದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಪಾದಯಾತ್ರೆ ಸೇರಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.
ಸಚಿವ ಸುನಿಲ್ ಕುಮಾರ್ ಸಹಿತ ಇಡೀ ಸರಕಾರ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ದಯವಿಟ್ಟು ನಮ್ಮ ಸಮುದಾಯದ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ಈ ಮೊದಲು ಹೇಳಿದಂತೆಯೇ ತಾವು ನಿಗಮ ಸ್ಥಾಪನೆ ಮತ್ತು 10 ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರಿನ ಫ್ರೀಡಂ ಪಾರ್ಕ್ ತನಕ ಪಾದಯಾತ್ರೆ ಮಾಡುವುದು ಶತಃ ಸಿದ್ಧ, ಇದನ್ನು ಯಾರೂ ತಪ್ಪಿಸಲು ಆಗದು ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಾದಯಾತ್ರೆ ಸಮಿತಿ ಜಿಲ್ಲಾ ಅಧ್ಯಕ್ಷರು ರಾಘವೇಂದ್ರ ಕೆ. ಅಮೀನ್, ಗೌರವಾಧ್ಯಕ್ಷರಾದ ದಿವಾಕರ್ ಸನಿಲ್, ಜಿಲ್ಲಾ ಸಂಚಾಲಕರು ವಿಶುಕುಮಾರ್ ಕಲ್ಯಾಣಪುರ , ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಬೈರಂಪಳ್ಳಿ , ಯೂತ್ ಅಧ್ಯಕ್ಷ ಸಂಜಯ್ ಪೂಜಾರಿ ಪರ್ಕಳ, ಬಿಲ್ಲವ ಮುಖಂಡರಾದ ಬಿಎನ್ ಶಂಕರ್ ಪೂಜಾರಿ, ಅಶೋಕ್ ಪೂಜಾರಿ ಹಾರಾಡಿ, ಬ್ರಹ್ಮಾವರ ಬಿಲ್ಲವ ಸಂಘದ ಉಪಾಧ್ಯಕ್ಷ ರಘು ಪೂಜಾರಿ, ಕೋಟ ಮೂರ್ತೆದಾರ ಸಂಘದ ಅಧ್ಯಕ್ಷ ಕೊರಗ ಪೂಜಾರಿ ಕೋಟ , ಉಪ್ಪೂರು ಬಿಲ್ಲವ ಸಂಘದ ಅಧ್ಯಕ್ಷ ರಾಜು ಪೂಜಾರಿ ಉಪ್ಪೂರು ,SNGV ಜಿಲ್ಲಾ ಅಧ್ಯಕ್ಷ ಜಗನ್ನಾಥ ಕೋಟೆ , ತಾಲೂಕು ಅಧ್ಯಕ್ಷ ಕರುಣಾಕರ ಪೂಜಾರಿ , ಮೂರ್ತೆದಾರರ ಸಂಘದ ಅಧ್ಯಕ್ಷ ಶಂಕರ್ ಪೂಜಾರಿ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮತಿ ಬ್ರಹ್ಮಾವರ ಉಪಸ್ಥಿತರಿದ್ದರು.