ಕುಂದಾಪುರ : ಬಾವಿಗೆ ಬಿದ್ದು ತಾಯಿ ಮಗಳು ಮೃತ್ಯು
ಕುಂದಾಪುರ ಜ.10 (ಉಡುಪಿ ಟೈಮ್ಸ್ ವರದಿ) : ಬಾವಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋಗಿ ಆಕಸ್ಮಿಕವಾಗಿ ತಾನೂ ಬಾವಿಗೆ ಬಿದ್ದು ತಾಯಿ, ಮಗಳು ಇಬ್ಬರೂ ಮೃತಪಟ್ಟ ಘಟನೆ ಕುಂದಾಪುರದ ಅಸೋಡು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ದೇವಕಿ ಶೆಡ್ತಿ(58) ಹಾಗೂ ಅವರ ತಾಯಿ ಗುಲಾಬಿ ಶೆಡ್ತಿ(85) ಮೃತಪಟ್ಟವರು.
ನಿನ್ನೆ ಮಧ್ಯಾಹ್ನದ ವೇಳೆ ಸ್ಥಳೀಯ ಸದಾಶಿವ ಶೆಟ್ಟಿ ಎಂಬವರು ಹಾಡಿಗೆ ಸೊಪ್ಪು ತರಲು ಹೋಗಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ.
ವೃದ್ಧರಾದ ಗುಲಾಬಿ ಶೆಡ್ತಿಯವರಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿರಲಿಲ್ಲ. ಆದ್ದರಿಂದ ನಿನ್ನೆ ಮದ್ಯಾಹ್ನದ ವೇಳೆ ಗುಲಾಬಿ ಶೆಡ್ತಿರವರು ಆಕಸ್ಮಿಕವಾಗಿ ಕಣ್ಣು ಕಾಣಿಸದೇ ನೀರಿಗೆ ಬಿದ್ದಿದ್ದು ಅವರನ್ನು ರಕ್ಷಿಸಲು ಅವರ ಮಗಳು ದೇವಕಿ ಶೆಡ್ತಿರವರು ಪ್ರಯತ್ನಿಸಿದಾಗ ಅವರು ಕೂಡಾ ಆಯತಪ್ಪಿ ನೀರಿಗೆ ಬಿದ್ದು ತಾಯಿ-ಮಗಳು ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ ಎಂಬುದಾಗಿ ಸ್ಥಳೀಯ ಸದಾಶಿವ ಶೆಟ್ಟಿ ಎಂಬವರು ನೀಡಿದ ಮಾಹಿತಿಯಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.