ಮಣಿಪಾಲ: ಅಗ್ನಿ ಅವಘಡ- ಹಲವು ಮರಗಳು ಬೆಂಕಿಗಾಹುತಿ

ಉಡುಪಿ ಜ.10 : 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರದ ಮೀಸಲು ಅರಣ್ಯ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದೆ.

ಕಾಡಿನಲ್ಲಿ ಹತ್ತಿಕೊಂಡ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತಲಿನ ಇಡೀ ಪರಿಸರಕ್ಕೆ ವ್ಯಾಪಿಸಿತ್ತು. ಇದರಿಂದ ಸುತ್ತಮುತ್ತ ಪರಿಸರದಲ್ಲಿ ಕೆಲಕಾಲ ದಟ್ಟ ಹೊಗೆ ಆವರಿಸಿಕೊಂಡಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಾಜೀವನಗರದ ರತ್ನ ಆಚಾರ್ಯ ಅವರ ಹಡಿಲು ಗದ್ದೆಯ ಹುಲ್ಲು ಗಾವಲು, ಮನೆಯೊಂದರ ಬಳಿ ರಾಶಿ ಹಾಕಿದ್ದ ಕಟ್ಟಿಗೆಯ ರಾಶಿ, ಕಾಡಿನ ಅಕೇಶಿಯ ಮರಗಳು ಬೆಂಕಿಗೆ ಆಹುತಿಯಾಗಿವೆ. ಮೊದಲಿಗೆ ಕಾಡಿನಲ್ಲಿ ಕಾಣಿಸಿಕೊಂಡ ಬೆಂಕಿಯ ಸಣ್ಣ ಕಿಡಿ, ನೋಡು ನೋಡುತ್ತಿದ್ದಂತೆ ವ್ಯಾಪಕವಾಗಿ ಹರಡಿದೆ. ರಾಜೀವನಗರದ 6ನೇ ಅಡ್ಡ ರಸ್ತೆಯ ಬಳಿಯ ಎರಡು ಎಕರೆಯಷ್ಟು ವ್ಯಾಪ್ತಿಯಲ್ಲಿ ಬೆಂಕಿ ಆವರಿಸಿತ್ತು.

ಕೂಡಲೇ ಎಚ್ಚೆತ್ತ ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!