ಶಿವಮೊಗ್ಗ ಹಲ್ಲೆ ಯತ್ನ ಪ್ರಕರಣ: ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗಿಲ್ಲ: ಆರೋಪಿ ಸಹೋದರಿ
ಶಿವಮೊಗ್ಗ, ಜ.10 : ಸಾಗರದಲ್ಲಿ ನಡೆದ ಬಜರಂಗದಳದ ಸಹ ಸಂಚಾಲಕ ಸುನೀಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಹೋದರಿಗೆ ಕಿರುಕುಳ ನೀಡಿದಕ್ಕೆ ಹಲ್ಲೆ ನಡೆಸಿರುವುದಾಗಿ ಪ್ರಮುಖ ಆರೋಪಿ ಸಮೀರ್ ಒಪ್ಪಿಕೊಂಡಿದ್ದಾನೆ.
ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮೀರ್ ಸಹೋದರಿ ಸಭಾ ಶೇಖ್ ಅವರು, ‘ಸುನೀಲ್ ಎಂಬಾತ ನನಗೆ ಕಳೆದ ವರ್ಷ ಹಿಜಾಬ್ ವಿಚಾರದಲ್ಲಿ ನಡೆದ ಗಲಾಟೆ ಬಳಿಕ ಕಿರುಕುಳ ನೀಡುತ್ತಿದ್ದ. ಹಿಜಾಬ್ ತೆಗೆಯುವಂತೆ ಒತ್ತಾಯಿಸುತ್ತಿದ್ದ. ಇದೇ ಕಾರಣಕ್ಕೆ ನನ್ನ ಅಣ್ಣ ಸಮೀರ್ ಸುನೀಲ್ ಗೆ ಹೆದರಿಸಲು ಹೋಗಿರಬೇಕು. ಆತ ಯಾರನ್ನೂ ಹೊಡೆಯುವುದು, ಬಡಿಯುವುದು ಮಾಡಿದವನಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೂ `ಸಮೀರ್ ವಿರುದ್ಧ ಯಾವುದೇ ಪ್ರಕರಣ ಈವರೆಗೆ ಇರಲಿಲ್ಲ. ಯಾವ ಸಂಘಟನೆಗೂ ಸೇರಿದವನಲ್ಲ, ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ’ ಎಂದು ತಿಳಿಸಿದ್ದಾರೆ.