ಸಾಗರ ಹಲ್ಲೆ ಯತ್ನ ಪ್ರಕರಣ: ತಂಗಿಯನ್ನು ಚುಡಾಯಿಸಿದ್ದಕ್ಕೆ ಮಚ್ಚು ಬೀಸಿದೆ ಎಂದ ಆರೋಪಿ
ಶಿವಮೊಗ್ಗ ಜ.10 : ಸಾಗರ ಪಟ್ಟಣದ ಭಜರಂಗದಳದ ಸಹ ಸಂಚಾಲಕನ ಮೇಲೆ ನಡೆದಿರುವ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಮೀರ್, ಇಮಿಯಾನ್ ಹಾಗೂ ಮನ್ಸೂರ್ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು.
ಈ ಬಗ್ಗೆ ಮಾಹಿತಿ ನೀಡಿರುವ ಶಿವಮೊಗ್ಗ ಎಸ್.ಪಿ ಮಿಥುನ್ ಕುಮಾರ್ ಅವರು, ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಚುಡಾಯಿಸುತ್ತಿರುವ ಬಗ್ಗೆ ಸುನೀಲ್ ಗೆ ಸಮೀರ್ ಎಚ್ಚರಿಕೆ ನೀಡಿದ್ದ. ಅಲ್ಲದೇ ತಂಗಿಯ ನಂಬರ್ ಕೊಡು ಅಂತ ಸಮೀರ್ ಗೆ ಸುನೀಲ್ ಕೇಳಿದ್ದ. ಹಲವು ಬಾರಿ ಎಚ್ಚರಿಕೆ ನೀಡಿದರೂ ಚುಡಾಯಿಸಿರುವುದು ನಿಲ್ಲಿಸಿರಲಿಲ್ಲ. ಅದರಂತೆಯೇ ಸೋಮವಾರ ಬೈಕ್ ನಲ್ಲಿ ಬರುತ್ತಿದ್ದ ಸಮೀರ್ ನನ್ನು ಸುನೀಲ್ ರೇಗಿಸಿದ್ದ ಹಾಗಾಗಿ ಕುಪಿತಗೊಂಡ ಸಮೀರ್ ತನ್ನ ಬೈಕಿನಲ್ಲಿದ್ದ ಮಚ್ಚು ತೆಗೆದುಕೊಂಡು ಹಲ್ಲೆಗೆ ಯತ್ನಿಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಸಮೀರನು ಕುರಿಗಾಹಿ ಯುವಕನಾಗಿರುವ ಕಾರಣ ಎಂದಿನಂತೆ ಕುರಿಗಳಿಗೆ ಸೊಪ್ಪು ತರಲು ಬೈಕಿನಲ್ಲಿ ಮಚ್ಚನ್ನು ಇಟ್ಟುಕೊಂಡಿದ್ದ. ಆ ಮಚ್ಚಿನಿಂದ ಹಲ್ಲೆಗೆ ಮುಂದಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ತಿಳಿಸಿದರು.
ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀರ್ ನ ಸ್ನೇಹಿತರಾದ ಇಮಿಯಾನ್ ಮತ್ತು ಮನ್ಸೂರ್ ನ್ನು ವಶಕ್ಕೆ ಪಡೆಯಲಾಗಿದ್ದು, ಈ ಪ್ರಕರಣದಲ್ಲಿ ಇವರ ಪಾತ್ರ ಏನೆಂಬುದು ತನಿಖೆ ನಡೆಸುತ್ತಿದ್ದೇವೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.