ಪ್ರಸಿದ್ಧ ಸಾಹಿತಿ ಸಾರಾ ಅಬೂಬಕ್ಕರ್ ನಿಧನ

ಮಂಗಳೂರು ಜ.10 : ಪ್ರಸಿದ್ಧ ಕನ್ನಡದ ಸಾಹಿತಿ ಸಾರಾ ಅಬೂಬಕ್ಕರ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಸಾರಾ ಅಬೂಬಕ್ಕರ್ (86) ಅವರನ್ನು ನಗರದ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಕ್ರಿಯೆ ಇಂದು ರಾತ್ರಿ 8 ಗಂಟೆಗೆ ನಡೆಯಲಿದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.

ಸಾರಾ ಅವರು ನಾಲ್ವರು ಪುತ್ರರನ್ನು ಅಗಲಿದ್ದಾರೆ.

ಕಾಸರಗೋಡು ಜಿಲ್ಲೆಯ ಪುದಿಯಾಪು (ಹೊಸಮನೆ) ತರವಾಡು ಮನೆಯಲ್ಲಿ ಪಿ. ಅಹ್ಮದ್ ಮತ್ತು ಜೈನಾಬಿ ದಂಪತಿಗಳ ಮಗಳಾಗಿ ಜನಿಸಿದ್ದರು. 1984ರಲ್ಲಿ ಅವರು ರಚಿಸಿದ ‘ಚಂದ್ರಗಿರಿಯ ತೀರದಲ್ಲಿ’ ಎಂಬ ಕಾದಂಬರಿಯ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅವರು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇವರ ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಕಾದಂಬರಿಯು ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಒರಿಯಾ ಭಾಷೆಗೆ ಅನುವಾದಗೊಂಡಿತು. `ಹೊತ್ತು ಕಂತುವ ಮುನ್ನ’ ಅವರ ಆತ್ಮಕತೆಯಾಗಿದ್ದು, ಸಹನಾ, ವಜ್ರಗಳು, ಕದನವಿರಾಮ, ಸುಳಿಯಲ್ಲಿ ಸಿಕ್ಕವರು, ತಳಒಡೆದ ದೋಣಿಯಲ್ಲಿ, ಪ್ರವಾಹ-ಸುಳಿ, ಪಂಜರ, ಇಳಿಜಾರು, ಕಾಣಿಕೆ ಮೊದಲಾದ ಕಾದಂಬರಿಗಳನ್ನು ರಚಿಸಿದ್ದಾರೆ.

ಐದು ಕಥಾಸಂಕಲನ, ನಾಟಕ, ಪ್ರವಾಸ ಕೃತಿಗಳು, ಪ್ರಬಂಧ ಸಂಕಲನಗಳನ್ನು ಹೊರತಂದಿದ್ದಾರೆ. ಕಮಲಾ ದಾಸ್ (ಮನೋಮಿ), ಬಿ.ಎಂ. ಸುಹರಾ(ಬಲೆ) ಪಿ.ಕೆ. ಬಾಲಕೃಷ್ಣನ್ (ನಾನಿನ್ನು ನಿದ್ರಿಸುವೆ), ಈಚರ ವಾರಿಯರ್ (ತುರ್ತು ಪರಿಸ್ಥಿತಿಯ ಕರಾಳ ಮುಖ), ಆರ್. ಬಿ. ಶ್ರೀಕುಮಾರ್ (ಧರ್ಮದ ಹೆಸರಿನಲ್ಲಿ), ಡಾ. ಕತೀಜಾ ಮುಮ್ತಾಜ್ (ಮುಂಬೆಳಕು), ಎಂ.ಎನ್. ಕಾರಶೇಂ(ವೈಕಂ ಮಹಮ್ಮದ್ ಬಷೀರ್), ಸಯ್ಯದ್ ಮೆಹಬೂಬ್ ಶಾ ಖಾದ್ರಿ (ಮುಸ್ಲಿಂ ಮಹಿಳೆಯರು ಮತ್ತು ತಲಾಖ್) ಎಂಬ ಕೃತಿಗಳನ್ನು ಮಲಯಾಳ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದರು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಗೌರವ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ಬಂದಿವೆ. ಪ್ರಕಾಶಕಿಯೂ ಆಗಿದ್ದ ಅವರು ಚಂದ್ರಗಿರಿ ಪ್ರಕಾಶನದ ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯವು ಅವರಿಗೆ 2008ರಲ್ಲಿ ಗೌರವ ಡಾಕ್ಟರೇಟ್ ನೀಡಿತ್ತು.

Leave a Reply

Your email address will not be published. Required fields are marked *

error: Content is protected !!