ಮಂಗಳೂರು: ಹೃದಯಾಘಾತದಿಂದ ಬಾಲಕ ಮೃತ್ಯು
ಮಂಗಳೂರು ಜ.10 : ಶಾಲೆಗೆ ಹೊರಡಲು ಸಿದ್ದನಾಗಿದ್ದ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೃಷ್ಣಾಪುರದಲ್ಲಿ ನಡೆದಿದೆ.
ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಅಬ್ದುಲ್ ರೆಹಮಾನ್ ಎಂಬವರ ಮಗ ಮೊಹಮ್ಮದ್ ಹಸೀಮ್ ಮೃತ ಬಾಲಕ. ಈತ ಬೆಳಗ್ಗೆ ಶಾಲೆಗೆ ಹೊರಡಲು ಸಿದ್ದನಾಗಿದ್ದ. ಈ ವೇಳೆ ಹಸೀಮ್‍ಗೆ ಏಕಾಏಕಿ ತಲೆ ಸುತ್ತು ಬಂದು ಬಿದ್ದಿದ್ದಾನೆ. ತಕ್ಷಣವೇ ಮನೆಮಂದಿ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ನಡುವೆ ಮರಣೋತ್ತರ ಪರೀಕ್ಷೆ ನಡೆಸದೆ ಮೃತ ಹಸೀಮ್ ನ ಪಾರ್ಥಿವ ಶರೀರವನ್ನು ಮನೆಗೆ ಕೊಂಡೊಯ್ಯಲು ಪೋಷಕರು ಮುಂದಾದಾಗ ಖಾಸಗಿ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯಲ್ಲಿದ್ದ ವೈದ್ಯರು ಮರಣೋತ್ತರ ಪರೀಕ್ಷೆಗೆ ನಡೆಸದೆ ಬಿಟ್ಟುಕೊಡಲು ಒಪ್ಪಿರಲಿಲ್ಲ. ಈ ಬಗ್ಗೆ ಗೊಂದಲ ಉಂಟಾದ ಕಾರಣ ಮಾಜಿ ಶಾಸಕ ಮೊದಿನ್ ಬಾವಾ ಅವರು ಸ್ಥಳಕ್ಕೆ ಆಗಮಿಸಿ ಬಾಲಕನ ಅಂತ್ಯಕ್ರಿಯೆಗೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.