ಪರಶುರಾಮ ಥೀಂ ಪಾರ್ಕ್ ಉದ್ಘಾಟನೆ ಉತ್ಸವವಲ್ಲ ಅಭಿವೃದ್ಧಿಯ ಲೋಕಾರ್ಪಣೆ: ಸಚಿವ ಸುನಿಲ್
ಕಾರ್ಕಳ, ಜ.10 : ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮವನ್ನು ಉತ್ಸವವಾಗಿ ನಡೆಸದೆ ಅಭಿವೃದ್ಧಿಯ ಲೋಕಾರ್ಪಣೆ ಮಾದರಿಯಲ್ಲಿ ನಡೆಸುತ್ತಿದ್ದೇವೆ ಎಂದು ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ಹೇಳಿದ್ದಾರೆ.
ಈ ಬಗ್ಗೆ ವಿಕಾಸ ಕಚೇರಿಯಲ್ಲಿ ನಡೆದ ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಕುರಿತ ಇಲಾಖೆ ಅಧಿಕಾರಿಗಳ ಜೊತೆಗಿನ ಹಾಗೂ ಉಪಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿರುವ ಅವರು, ಕಾರ್ಕಳ ಉತ್ಸವ ತಾಲೂಕಿನ ಜನತೆಯ ಉತ್ಸವವಾಗಿತ್ತು. ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ ಉತ್ಸವವಾಗಿ ನಡೆಸುತಿಲ್ಲ. ಪ್ರವಾಸಿ ಕ್ಷೇತ್ರವಾಗಿ ಕಾರ್ಕಳವನ್ನು ಹಲವು ಆಯಾಮಗಳಲ್ಲಿ ಹೇಗೆಲ್ಲ ಅಭಿವೃದ್ಧಿ ಪಡಿಸುವುದಕ್ಕೆ ಸಾಧ್ಯವೊ ಅದಕ್ಕೆ ಪೂರಕವಾಗಿ ಥೀಂ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಲೋಕಾರ್ಪಣೆಯನ್ನು ಉತ್ಸವವಾಗಿ ನಡೆಸದೆ ಅಭಿವೃದ್ಧಿಯ ಲೋಕಾರ್ಪಣೆ ಮಾದರಿಯಲ್ಲಿ ನಡೆಸುತ್ತಿದ್ದೇವೆ ಎಂದು ಹೇಳಿದರು.
ಹಾಗೂ ಈ ಪ್ರಯುಕ್ತ ಜ.11 ರಿಂದ 13ರ ವರೆಗೆ ಕಾರ್ಕಳ ನಗರ ವ್ಯಾಪ್ತಿ ಹಾಗೂ 7 ಗ್ರಾ.ಪಂ. ವ್ಯಾಪ್ತಿಯ ಗ್ರಾಮ ಪಂಚಾಯತ್ ಗಳಲ್ಲಿ ಪೂರ್ವ ಸಿದ್ಧತೆಯ ಸಭೆ ನಡೆಸಲಾಗುವುದು. ಜ. 18 ರಂದು ಕಾರ್ಯಾಲಯ ಉದ್ಘಾಟನೆ ನಡೆಸಲಾಗುವುದು. ಜ 22 ರಂದು ಬ್ರಹತ್ ಸ್ವಚ್ಛತಾ ಅಭಿಯಾನ ಮತ್ತು ಜ.20 ಮತ್ತು 21 ರಂದು ಆಮಂತ್ರಣ ಪತ್ರಿಕೆ ಆಹ್ವಾನ ಪತ್ರಿಕೆ ಹಂಚುವಿಕೆ ಅಭಿಯಾನ ನಡೆಸುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ತಹಶಿಲ್ದಾರ್ ಪ್ರದೀಪ ಕುರ್ಡೆಕರ್, ಹೆಬ್ರಿ ತಹಶಿಲ್ದಾರ್ ಪುರಂದರ ಕೆ. ತಾಲೂಕು ಪಂಚಾಯತ್ ಕಾರ್ಕಳ ಇಒ ಗುರುದತ್, ಹೆಬ್ರಿ ಇಒ ಶಶಿಧರ್, ಡಿವೈಎಸ್ಪಿ ವಿಜಯ ಪ್ರಸಾದ್, ಆರ್.ಒ ಪ್ರಭಾಕರ ಆರ್., ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಮಹಾವೀರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.