ಕೆ.ಎಸ್.ಆರ್.ಟಿ.ಸಿ ಬಸ್-ಬೈಕ್ ಅಪಘಾತ: ಯೋಧ ಸೇರಿ ಇಬ್ಬರು ಮೃತ್ಯು
ಚೆನ್ನೈ ಜ.9 : ಬೈಕ್ ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದು ಯೋಧ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಮಿಳುನಾಡಿನ ಕೃಷ್ಣಗಿರಿಯ ಗುರುಪರಪಲ್ಲಿ ಬಳಿ ನಡೆದಿದೆ.
ಗುರುಪರಪಲ್ಲಿಯ ಒಟ್ಟೆರ್ ಗ್ರಾಮ ನಿವಾಸಿಗಳಾದ ಯೋಧ ಸುಂದರೇಶನ್ ಹಾಗೂ ರೈತ ಗಣೇಶನ್ ಮೃತಪಟ್ಟವರು.
ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಇಬ್ಬರೂ ಬೈಕ್ ನಲ್ಲಿ ಚೆನ್ನೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಬೆಂಗಳೂರಿನಿಂದ ತಿರುಕೋವಿಲೂರು ಮಾರ್ಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರರಿಬ್ಬರೂ ಬಸ್ಸಿನ ಅಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬಸ್ಸಿನ ಅಡಿ ಸಿಲುಕಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ವೇಗವಾಗಿ ಹರಡಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ವ್ಯಾಪಿಸಿದೆ. ತಕ್ಷಣ ಬಸ್ ನಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರು ಕೆಳಗಿಳಿದು ಪ್ರಾಣ ಉಳಿಸಿಕೊಂಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಇಬ್ಬರ ಮೃತದೇಹಗಳನ್ನು ಪೊಲೀಸರು ಹೊರತೆಗೆದು ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯ ಕುರಿತು ಗುರುಪರಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.