ಜಲ ಜೀವನ್ ಮಿಷನ್ ಯೋಜನೆ ಸರಿಯಾಗಿ ಅನುಷ್ಠಾನಗೊಳಿಸಿ – ದಿನಕರ ಬಾಬು
ಉಡುಪಿ(ಉಡುಪಿ ಟೈಮ್ಸ್ ವರದಿ): ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಗ್ರಾಮದ ಜನತೆಯೊಂದಿಗೆ ಚರ್ಚಿಸಿ ಕಾಮಗಾರಿಗಳನ್ನು ಕೈಗೊಳ್ಳಿ, ಇದರಿಂದ ಕಾಮಗಾರಿಯ ಸಂಪೂರ್ಣ ಪ್ರಯೋಜನ ಸಾರ್ವಜನಿಕರಿಗೆ ದೊರೆಯಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜ.21 ರಂದು ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿನ ಸ್ಥಳೀಯ ಜಲ ಮೂಲಗಳನ್ನು ಗುರುತಿಸಲು ಗ್ರಾಮಸ್ಥರ ಮತ್ತು ಜನಪ್ರತಿನಿಧಿಗಳ ನೆರವು ಅಗತ್ಯವಿದೆ. ಯಾವ ಕಾಮಗಾರಿಗಳು ತುರ್ತು ಅತ್ಯಗತ್ಯವಾಗಿವೆ ಎಂಬುದನ್ನು ತಿಳಿದು ಅಂತಹ ಕಾಮಗಾರಿಗಳನ್ನು ಆದ್ಯತೆಯಲ್ಲಿ ಕೈಗೊಳ್ಳುವಂತೆ ಸೂಚಿಸಿ, ಕಾಮಗಾರಿ ಆರಂಭಕ್ಕೆ ಮುನ್ನ ಸ್ಥಳೀಯವಾಗಿ ಸಭೆ ಕರೆದು ಅಭಿಪ್ರಾಯಗಳನ್ನು ಸಂಗ್ರಹಿಸಿ, ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾನದಂಡದಲ್ಲಿ ಆದಾಯಮಿತಿಯನ್ನು ವಸತಿ ನಿಗಮದಿಂದ ರೂ. 32,000 ಕ್ಕೆ ನಿಗಧಿಪಡಿಸಿದ್ದು, ಇದರಿಂದ ಬಿ.ಪಿಎಲ್ ಕಾರ್ಡ್ ಹೊಂದಲು ಆಧಾಯಮಿತಿ ರೂ.1,20,000ಇದೆ, ಇದರಿಂದ ರೂ. 32,000 ಕ್ಕಿಂತ ಹೆಚ್ಚು ಆದಾಯ ಹೊಂದಿರುವ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಅಸಾಧ್ಯವಾಗಿದೆ ಅದ್ದರಿಂದ ರೂ. 32,000 ಕ್ಕಿಂತ ಹೆಚ್ಚು ಆದಾಯವಿರುವ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗೆ, ವಸತಿ ಯೋಜನೆ ಪಡೆಯಲು ಆದಾಯಮಿತಿಯನ್ನು ಕಡಿಮೆ ಮಾಡುವ ಕುರಿತಂತೆ ರಾಜೀವ್ ಗಾಂಧೀ ವಸತಿ ನಿಗಮಕ್ಕೆ ಪತ್ರ ಬರೆಯುವಂತೆ ತಿಳಿಸಿದರು.
ಇನ್ನು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೇಟ್ಟಿ ಹಾಗೂ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಮಾತನಾಡಿ, ವಸತಿ ಯೋಜನೆಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿಯೇ ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುವದುರಿಂದ, ದಾಖಲೆಗಳ ಕೊರೆತೆಯಿಂದ ಅನಗತ್ಯವಾಗಿ ಮನೆಗಳು ಬ್ಲಾಕ್ ಆಗುವುದು ತಪ್ಪಿ, ಸಕಾಲದಲ್ಲಿ ಫಲಾನುಭವಿಗೆ ಯೋಜನೆಯ ಪ್ರಯೋಜನ ದೊರೆಯಲಿರುವ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಸಭೆಯಲ್ಲಿ ಡಿ,ಹೆಚ್.ಓ. ಡಾ.ಸುದೀರ್ ಚಂದ್ರ ಸೂಡಾ ಅವರು ಮಾತನಾಡಿ, ಕೋವಿಡ್ ಲಸಿಕೆಯನ್ನು ಜಿಲ್ಲೆಯಲ್ಲಿ ಪ್ರಾರಂಭಿಕ ಹಂಥದಲ್ಲಿ 22,230 ಮಂದಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ನೀಡಲು ಗುರಿ ಹೊಂದಿದ್ದು, ಇದುವರೆಗೆ 60% ಸಾಧನೆ ಆಗಿದ್ದು, 5 ದಿನದಲ್ಲಿ ಸಂಪೂರ್ಣ ಗುರಿ ಸಾಧಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮನೆಗಳಿಂದ ಹಸಿ ಕಸ ಸಂಗ್ರಹಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ವಾರದಲ್ಲಿ ಒಂದು ದಿನ ಒಣ ಕಸ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು.ಈ ಸಂದರ್ಭ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಜಿ ಪುತ್ರನ್, ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.