ಸಿಡ್ನಿಯಲ್ಲಿ ಪುತ್ತಿಗೆ ಶ್ರೀಗಳಿಗೆ ಸಂಭ್ರಮದ ಗುರುವಂದನೆ
ಸಿಡ್ನಿ ಜ.7(ಉಡುಪಿ ಟೈಮ್ಸ್ ವರದಿ) : ಪರ್ಯಾಯ ವಿಶ್ವ ಸಂಚಾರದ ನಿಮಿತ್ತ ಸಿಡ್ನಿ ಮಹಾನಗರಕ್ಕೆ ಆಗಮಿಸಿದ ಭಾವಿ ಪರ್ಯಾಯ ಶ್ರೀಗಳಾದ ಶ್ರೀ ಪುತ್ತಿಗೆ ಶ್ರೀಪಾದರಿಗೆ ಅಲ್ಲಿಯ ಭಕ್ತಜನರು ಭಕ್ತಿ ಗೌರವ ಭಾವಗಳೊಂದಿಗೆ ತುಲಾಭಾರವನ್ನು ನೆರವೇರಿಸಿದರು.
ಶ್ರೀಗಳನ್ನು ಸಾಲಂಕೃತ ಕುದುರೆ ಜಟಕಾ ಬಂಡಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಹೆಲೇನ್ಸ್ ಬರ್ಗಿನ ಪ್ರಸಿದ್ಧ ಶ್ರೀನಿವಾಸ ದೇಗುಲದದಲ್ಲಿ ಸಂಸ್ಥಾನ ಪೂಜೆ, ಮುದ್ರಾಧಾರಣೆ, ಪಾದಪೂಜೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ಮುಂತಾದ ಕಾರ್ಯಕ್ರಮಗಳು ಜರಗಿದವು.
ಈ ವೇಳೆ ಶ್ರೀಪಾದರು ಎಲ್ಲ ಭಕ್ತರನ್ನು ಉಡುಪಿಯ ತಮ್ಮ ಪರ್ಯಾಯಕ್ಕೆ ಬರುವಂತೆ ಆಹ್ವಾನಿಸಿದರು. ಇದೇ ವೇಳೆ ಖುಷಿ ದಕ್ಷಿಣಾಮೂರ್ತಿ ಇವರು ಶ್ರೀಗಳ ಚಿತ್ರವನ್ನು ಸ್ಯಾಂಡ್ ಆರ್ಟ್ ನಲ್ಲಿ ಕೆಲವೇ ಕ್ಷಣಗಳಲ್ಲಿ ರಚಿಸಿ ಶ್ರೀಗಳಿಗೆ ಭಕ್ತಿಯಿಂದ ಅರ್ಪಿಸಿದರು. ಹಾಗೂ ಸಿಡ್ನಿಯ ತುಳುಸಂಘ ಡಾ ಪರವಾಗಿ ಪ್ರಸನ್ನಾಚಾರ್ಯ ಮತ್ತು ಪ್ರಧಾನ ಅರ್ಚಕ ನಿತೀಶಾಚಾರ್ಯ ಶ್ರೀಗಳಿಗೆ ಬೆಳ್ಳಿಯ ಕಿರೀಟವನ್ನು ಸಮರ್ಪಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಧರ ಕುಂಶಿ, ಜಗನ್ನಾಥ್, ಶ್ರೀನಿವಾಸ ಜೋಶಿಯವರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.