ಕಾಸರಗೋಡು: ಆನ್‍ಲೈನ್ ಆಹಾರ ಸೇವಿಸಿ ವಿದ್ಯಾರ್ಥಿನಿ ಮೃತ್ಯು
ಕಾಸರಗೋಡು, ಜ.7 : ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿದ್ದ ಆಹಾರವನ್ನು ಸೇವಿಸಿ ಅಸ್ವಸ್ಥಗೊಂಡ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ (19) ಎಂದು ಗುರುತಿಸಲಾಗಿದೆ.
ಹೋಟೆಲ್ ನಿಂದ ತರಿಸಿದ್ದ ಆಹಾರ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಈಕೆಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದ ಅಂಜುಶ್ರಿ ಪಾರ್ವತಿ ಅವರು ಆರು ದಿನಗಳ ಹಿಂದೆ ಹೋಟೆಲೊಂದರಿಂದ ಆನ್ ಲೈನ್ ಮೂಲಕ ಖರೀದಿಸಿ ಸೇವಿಸಿದ್ದರು. ಬಳಿಕ ಅಸ್ವಸ್ಥ ಗೊಂಡಿದ್ದ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಸವರ್ಷದ ಹಿನ್ನಲೆಯಲ್ಲಿ ಹೋಟೆಲ್ ನಿಂದ ಆನ್ ಲೈನ್ ಮೂಲಕ ಆಹಾರ ಖರೀದಿಸಿ ಕುಟುಂಬದವರ ಜೊತೆ ಸೇವಿಸಿದ್ದು ಆಹಾರ ಸೇವಿಸಿದ್ದ ಎಲ್ಲರಲ್ಲಿ ಅಸ್ವಸ್ಥತೆ ಕಂಡುಬಂದಿತ್ತು. ಆದರೆ ಅಂಜುಶ್ರಿ ಅವರು ತೀವ್ರ ಅಸ್ವಸ್ಥಗೊಂಡ ಕಾರಣ ಮೃತಪಟ್ಟಿದ್ದರು.
ಇದೀಗ ವಿಷಹಾರ ಸೇವನೆಯಿಂದ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ನೀಡಿ, ತುರ್ತು ವರದಿ ನೀಡುವಂತೆ ಆಹಾರ ಸುರಕ್ಷಾ ಆಯುಕ್ತರಿಗೆ ಆದೇಶಿಸಿದ್ದಾರೆ. ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.