ವಕೀಲರ ಮೇಲೆ ಹಲ್ಲೆ- ಆರೋಪಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು ಜ.7 : ರಾಜ್ಯದಲ್ಲೇ ಮೊದಲು ಎಂಬಂತೆ ವಕೀಲರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಿದ ಪ್ರಕರಣ ಚಿತ್ರದುರ್ಗದಲ್ಲಿ ನಡೆದಿದೆ.

ಟೌನ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ನಿಶಾನಿ ಜಯಣ್ಣ ಶಿಕ್ಷೆಗೆ ಗುರಿಯಾದ ವ್ಯಕ್ತಿ. ವಕೀಲ ಶಿವಕುಮಾರ್ ಹಲ್ಲೆಗೊಳಗಾದವರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಕಲಂ 307 ಮತ್ತು 324ರ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 50,000ರೂ. ದಂಡ ವಿಧಿಸಲಾಗಿದೆ. ಜೊತೆಗೆ ಹಲ್ಲೆಗೊಳಗಾದ ವಕೀಲರಿಗೆ ಮೂರು ಲಕ್ಷ ರೂ. ಪರಿಹಾರ ನೀಡುವಂತೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶರಾದ ಹಂಚಾಟೆ ಸಂಜೀವ ಕುಮಾರ್ ಆದೇಶ ನೀಡಿದ್ದಾರೆ.

ಹಾಗೂ ವಕೀಲರು ಸಮಾಜದ ಒಂದು ಭಾಗ. ಹಾಗೆಯೇ ನ್ಯಾಯಾಂಗದ ಅವಿಭಾಜ್ಯ ಅಂಗವೂ ಆಗಿದ್ದಾರೆ. ಇದು ವಕೀಲರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಮಾತ್ರವಲ್ಲ, ಇಡೀ ನ್ಯಾಯಾಂಗದ ಮೇಲೆ ನಡೆದ ದಾಳಿಯಾಗಿತ್ತು ಎಂದು ಹೇಳಿದ್ದಾರೆ.

ಪ್ರಕರಣದ ಒಂದನೇ ಆರೋಪಿ ಸೇಜಪ್ಪ ಮೃತಪಟ್ಟಿದ್ದು, ತನಿಖೆ ನಡೆಸಿದ ಕೋಟೆ ಠಾಣೆ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

2010ರ ಎ.9 ರಂದು ರಾತ್ರಿ ವಕೀಲರಾದ ಶಿವಕುಮಾರ್ ಅವರು ತಮ್ಮ ಕೆಲಸ ಮುಗಿಸಿಕೊಂಡು ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ, ಸೇಜಪ್ಪ, ನಿಶಾನಿ ಜಯಣ್ಣ ದ್ವಿಚಕ್ರ ವಾಹನದಲ್ಲಿ ಬಂದು ಕಬ್ಬಿಣದ ಸಲಾಕೆಯಿಂದ ಹಲ್ಲೆ ನಡೆಸಿದ್ದರು. ವಕೀಲ ಶಿವಕುಮಾರ್ ತಮ್ಮ ಕಕ್ಷಿದಾರ ವಿಜಯ್ ಕುಮಾರ್ ಅವರಿಗೆ ಸೇರಿದ ಜಮೀನು ವಿವಾದವೊಂದಕ್ಕೆ ಸಂಬಂಧಿಸಿದಂತೆ ಒಂದನೇ ಅಪರ ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದರು.

Leave a Reply

Your email address will not be published. Required fields are marked *

error: Content is protected !!