ಈಶ್ವರಪ್ಪಗೆ ಮತ್ತೆ ಸಂಕಷ್ಟ ತಂದಿದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ
ಬೆಂಗಳೂರು, ಜ.6 : ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಸಂಕಷ್ಟ ಎದುರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಸಲ್ಲಿಸಿರುವ `ಬಿ’ ರಿಪೋರ್ಟ್ ನ ಸಂಪೂರ್ಣ ಸಾಕ್ಷ್ಯಗಳನ್ನು ನ್ಯಾಯಾಲಯದ ಸುಪರ್ದಿಗೆ ನೀಡುವಂತೆ 42ನೇ ವಿಶೇಷ ಕೋರ್ಟ್ ಆದೇಶಿಸಿದೆ. ಇದೀಗ ಮತ್ತೆ ಈಶ್ವರಪ್ಪ ಅವರು ಸಂಕಷ್ಟ ಎದುರಿಸುವಂತೆ ಆಗಿದೆ. ಈ ಹಿಂದೆ ಕುಟುಂಬಸ್ಥರು ಬಿ. ರಿಪೋರ್ಟ್ ಪ್ರಶ್ನಿಸಿ, ಕೋರ್ಟ್ ಗೆ ಹೋಗಿದ್ದರು. ಆ ಸಂದರ್ಭದಲ್ಲಿ ದಾಖಲಾತಿ ನೀಡಿದ್ದ ಉಡುಪಿ ಪೊಲೀಸರು ಸಂಪೂರ್ಣ ದಾಖಲಾತಿ ಸಲ್ಲಿಕೆಗೆ ಹಿಂದೇಟು ಹಾಕಿದ್ದರು. ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ಬಳಿಕ, ನ್ಯಾಯಾಲಯವು ಜ.31 ರೊಳಗೆ ಎಲ್ಲ ಸಾಕ್ಷ್ಯಗಳನ್ನು ಕೋರ್ಟ್ಗೆ ಸಲ್ಲಿಸಿ ಎಂದು ಈ ಹೊಸ ಆದೇಶ ಮಾಡಿದೆ.
ಪ್ರಕರಣದ ಕೆಲವೊಂದು ಸಾಕ್ಷ್ಯಗಳಲ್ಲಿ ಸಂತೋಷ್ ಪಾಟೀಲ್, ಮಾಜಿ ಸಚಿವ ಈಶ್ವರಪ್ಪ ಪಿಎಗೆ ಹಣ ನೀಡಿರುವುದು ವಾಟ್ಸ್ ಆಪ್ ಚಾಟ್ ನಲ್ಲಿ ಬಹಿರಂಗವಾಗಿದೆ. ಅಲ್ಲದೆ, ವಾಟ್ಸ್ ಆಪ್ ಚಾಟ್ ಪ್ರತಿ ಕೂಡ ಲಭ್ಯವಾಗಿದೆ. ಇದು ಈಶ್ವರಪ್ಪ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಈ ವಿಚಾರವಾಗಿ ಸಂತೋಷ್ ಮೃತದೇಹ ಸಿಕ್ಕ ಹೋಟೆಲ್ ಸಿಸಿಟಿವಿ ನೀಡಬೇಕು, ಮಾತ್ರವಲ್ಲದೆ ಪೊಲೀಸರು ಮಾಡಿದ ವಿಡಿಯೋವನ್ನು ಜ.31 ರಂದು ತನಿಖಾಧಿಕಾರಿಯೇ ಖುದ್ದು ಕೋರ್ಟ್ ಮುಂದೆ ಹಾಜರಾಗಿ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.
ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿದ್ದ ಸಂತೋಷ್ ಪಾಟೀಲ್ ಸಹೋದರ, ಅಸಲಿ ಸಾಕ್ಷ್ಯಗಳನ್ನು ಮರೆಮಾಚಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.