ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ವಿಚಾರ: ಎಲ್ಲಾ ಬಾಕಿ ಅರ್ಜಿಗಳನ್ನು ತನಗೇ ವಹಿಸಿಕೊಂಡ ಸುಪ್ರೀಂ ಕೋರ್ಟ್
ನವದೆಹಲಿ ಜ.6 : ದೇಶದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಚಾರವಾಗಿ ವಿವಿಧ ಹೈಕೋರ್ಟ್ ಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತನಗೇ ವರ್ಗಾಯಿಸಿಕೊಂಡಿದೆ.
2022ರ ನವೆಂಬರ್ 25ರಂದು ಇಬ್ಬರು ಸಲಿಂಗಕಾಮಿ ದಂಪತಿ ತಮ್ಮ ವಿವಾಹದ ಹಕ್ಕನ್ನು ಜಾರಿಗೊಳಿಸಲು ಮತ್ತು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‍ಗೆ ಪ್ರತ್ಯೇಕ ಮನವಿ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ ಜೆ.ಪಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ಫೆ. 15ರೊಳಗೆ ಎಲ್ಲಾ ಅರ್ಜಿಗಳಿಗೆ ಜಂಟಿ ಉತ್ತರವನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು ಮತ್ತು ಎಲ್ಲಾ ಅರ್ಜಿಗಳನ್ನು ಮಾರ್ಚ್‍ನಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು. ಹಾಗೂ ಒಂದು ವೇಳೆ ಯಾವುದೇ ಅರ್ಜಿದಾರರು ವಿಚಾರಣೆಗೆ ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದರೆ, ವರ್ಚುವಲ್ ವೇದಿಕೆಯ ಮೂಲಕವೂ ಹಾಜರಾಗಬಹುದು ಎಂದು ತಿಳಿಸಿದೆ. ಅಲ್ಲದೆ ಈ ಸಂಬಂಧ ಕೇಂದ್ರ ಸರ್ಕಾರವು ತನ್ನ ಪ್ರತಿಕ್ರಿಯೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು.