ಅಭಿವೃದ್ಧಿಯಲ್ಲಿ 32 ಇಲಾಖೆಗಳು ಶೇ.50 ಗಡಿ ದಾಟಿಲ್ಲ : ಸಿಎಂ ಬೊಮ್ಮಾಯಿ

ಬೆಂಗಳೂರು ಜ.5 : ಅಭಿವೃದ್ಧಿಯಲ್ಲಿ ರಾಜ್ಯದ 32 ಇಲಾಖೆಗಳು ಶೇ.50ರ ಗಡಿಯನ್ನು ದಾಟಿಲ್ಲ. ಕೆಲ ಇಲಾಖೆಗಳು ಶೇ. 30ರ ಗಡಿಯನ್ನೂ ದಾಟಿಲ್ಲ. ಬಹುತೇಕ ಇಲಾಖೆಗಳು ಕಳಪೆ ಪ್ರದರ್ಶನ ತೋರಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಪರಿಷತ್‍ಗೆ ಸಲ್ಲಿಸಿರುವ ವರದಿ ಪಟ್ಟಿಯಲ್ಲಿ ತಿಳಿಸಿದ್ದಾರೆ.

ಈ ಮೂಲಕ 2022-23ರ ಸಾಲಿನ ಬಜೆಟ್‍ನಲ್ಲಿ ಒಟ್ಟು ಅನುದಾನದಲ್ಲಿಯೆ 15,460 ಕೋಟಿ ರೂ. ಬಾಕಿ ಉಳಿಸಿಕೊಂಡು ಕೇವಲ ಶೇ.47ರಷ್ಟು ಪ್ರಗತಿ ಸಾಧಿಸಿರುವ ಇಲಾಖೆಗಳ ಪಟ್ಟಿಯೂ ಇದೀಗ ಮುನ್ನೆಲೆಗೆ ಬಂದಿವೆ. ಅಲ್ಲದೇ 40 ಪಸೆರ್ಂಟ್ ಕಮಿಷನ್ ಆರೋಪಕ್ಕೆ ಗುರಿಯಾಗಿದ್ದ ಇಲಾಖೆಗಳಲ್ಲಿ ಕಾರ್ಯಕ್ರಮಗಳಿಗೆ ಚುರುಕಿನ ವೇಗ ದೊರೆತಿದ್ದರೇ ಕುಡಿಯುವ ನೀರು ಸೇರಿದಂತೆ ಜನಕಲ್ಯಾಣ ಯೋಜನೆಗಳ ಪ್ರಗತಿಯು ಶೇ.50ರ ಗಡಿಯನ್ನೂ ದಾಟಿಲ್ಲ. ಈ ಸಂಬಂಧ ಅಂಕಿ ಅಂಶಗಳನ್ನೊಳಗೊಂಡ ಪಟ್ಟಿಯು ಲಭ್ಯವಾಗಿದೆ. ಇದರಲ್ಲಿ ಶೇ. 40ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿರುವ ಇಲಾಖೆಗಳ ಪಟ್ಟಿಯಲ್ಲಿ ಕೃಷಿ, ಇ-ಆಡಳಿತ, ಅಲ್ಪಸಂಖ್ಯಾತರ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಾರ್ತೆ, ಪ್ರವಾಸೋದ್ಯಮ, ಆಹಾರ ನಾಗರಿಕ ಸರಬರಾಜು, ವಸತಿ, ಕೈ ಮಗ್ಗ ಜವಳಿ, ಭಾರೀ ಮತ್ತು ಮಧ್ಯಮ ಕೈಗಾರಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳು. ಹಾಗೂ ಶೇ.40ರಿಂದ 50ರ ಆಸುಪಾಸಿನಲ್ಲಿರುವ ಅಭಿವೃದ್ಧಿ ಸಾಧಿಸಿರುವ ತೋಟಗಾರಿಕೆ, ಆರ್ಥಿಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗ್ರಾಮೀಣ ಮತ್ತು ಪಂಚಾಯತ್ ಅಭಿವೃದ್ಧಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಸಹಕಾರ, ಹಿಂದುಳಿದ ವರ್ಗಗಳ ಕಲ್ಯಾಣ, ಮಾಹಿತಿ ತಂತ್ರಜ್ಞಾನ, ಉನ್ನತ ಶಿಕ್ಷಣ, ಸಣ್ಣ ಕೈಗಾರಿಕೆ, ಗಣಿ, ನಗರಾಭಿವೃದ್ಧಿ, ಲೋಕೋಪಯೋಗಿ, ಭಾರೀ ನೀರಾವರಿ, ವೈದ್ಯಕೀಯ, ಆರೋಗ್ಯ, ಕಾರ್ಮಿಕ, ಕೌಶಲ್ಯ, ಇಂಧನ, ಋಣ ಮೇಲುಸ್ತುವಾರಿ ಇಲಾಖೆ ಇವೆ ಎಂದು ತಿಳಿದು ಬಂದಿದೆ.

ಕೃಷಿ ಇಲಾಖೆಗೆ ಆಯವ್ಯಯದಲ್ಲಿ 6,76,115 ಲಕ್ಷ ರೂ.ಗಳನ್ನು ಒದಗಿಸಿತ್ತು. ಈ ಪೈಕಿ ಅಕ್ಟೋಬರ್ 2022ರ ಅಂತ್ಯಕ್ಕೆ 1,63,963 ಲಕ್ಷ ರೂ. ಖರ್ಚಾಗಿತ್ತು. ಇದು ಒಟ್ಟು ಅನುದಾನಕ್ಕೆ ಶೇ.24ರಷ್ಟು ಮಾತ್ರ ವೆಚ್ಚವಾಗಿತ್ತು. 1,23,998 ಲಕ್ಷ ರೂ. ಪೈಕಿ 60,657 ಲಕ್ಷ ರೂ. ಖರ್ಚುಮಾಡಿರುವ ತೋಟಗಾರಿಕೆ ಇಲಾಖೆಯು ಒಟ್ಟು ಅನುದಾನದಲ್ಲಿ ಶೇ.49ರಷ್ಟು ಮಾತ್ರ ವೆಚ್ಚ ಮಾಡಿದೆ. ಆರ್ಥಿಕ ಇಲಾಖೆಯು 28,48,866 ಲಕ್ಷ ರೂ. ಪೈಕಿ 12,90,222 ಲಕ್ಷ ರೂ. ವೆಚ್ಚ ಮಾಡಿ ಶೇ.45ರಷ್ಟು ಪ್ರಗತಿ ಸಾಧಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 17,24,308 ಲಕ್ಷ ರೂ. ಪೈಕಿ 7,03,280 ಲಕ್ಷ ರೂ. ಖರ್ಚು ಮಾಡಿ ಶೇ. 41ರಷ್ಟೇ ಪ್ರಗತಿ ಸಾಧಿಸಿದೆ. ಅರಣ್ಯ ಇಲಾಖೆಯು ಕೂಡ 2,04,741 ಲಕ್ಷ ರೂ. ಪೈಕಿ 88,985 ಲಕ್ಷ ರೂ. ವೆಚ್ಚ ಮಾಡಿ ಶೇ. 43ರಷ್ಟು ಪ್ರಗತಿ ಸಾಧಿಸಿದೆ. ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯು 1,278 ಲಕ್ಷ ರೂ. ಪೈಕಿ 627 ಲಕ್ಷ ಖರ್ಚು ಮಾಡಿ ಶೇ. 49ರಷ್ಟು ಸಾಧನೆ ತೋರಿದೆ. ಇದರ ಜೊತೆಗೆ ಸಹಕಾರ ಇಲಾಖೆಯು 1,78,698 ಲಕ್ಷ ರೂ. ಪೈಕಿ 83,262 ಲಕ್ಷ ರೂ. ವೆಚ್ಚ ಮಾಡಿ ಶೇ.47ರಷ್ಟು ಸಾಧನೆ ತೋರಿದೆ. ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯು3,81,785 ಲಕ್ಷ ರೂ. ಪೈಕಿ 1,98,107 ಲಕ್ಷ ರೂ. ಖರ್ಚು ಮಾಡಿ ಶೇ.52ರಷ್ಟು ಪ್ರಗತಿ ಸಾಧಿಸಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು 1,49,563 ಲಕ್ಷ ರೂ. ಪೈಕಿ 80,603 ಲಕ್ಷ ರೂ. ಖರ್ಚು ಮಾಡಿ ಶೆ. 54ರಷ್ಟು ಸಾಧನೆ ಪ್ರದರ್ಶಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2,37,160 ಲಕ್ಷ ರೂ. ಪೈಕಿ 1,18,164 ಲಕ್ಷ ರೂ. ಖರ್ಚು ಮಾಡಿ ಶೇ.50ರಷ್ಟು ಪ್ರಗತಿ ಸಾಧಿಸಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 1,49,518 ಲಕ್ಷ ರೂ.ನಲ್ಲಿ 54,120 ಲಕ್ಷ ರೂ. ವೆಚ್ಚ ಮಾಡಿ ಕೇವಲ ಶೇ. 36ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು 4,79,159 ಲಕ್ಷ ರೂ. ಪೈಕಿ 1,67,239 ಲಕ್ಷ ರೂ. ಖರ್ಚು ಮಾಡಿ ಶೇ.36ರಷ್ಟು ಮಾತ್ರ ಪ್ರಗತಿ ಪ್ರದರ್ಶಿಸಿದೆ. ಪ್ರವಾಸೋದ್ಯಮ ಇಲಾಖೆಯು 33,023 ಲಕ್ಷ ರೂ. ಪೈಕಿ 5,302 ಲಕ್ಷ ರೂ. ಖರ್ಚು ಮಾಡಿ ಶೇ.16ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2,98,741 ಲಕ್ಷ ರೂ. ಪೈಕಿ 73,427 ಲಕ್ಷ ರೂ. ಖರ್ಚು ಮಾಡುವ ಮೂಲಕ ಶೇ.25ರಷ್ಟು ಮಾತ್ರ ಪ್ರಗತಿ ಹೊಂದಿದೆ. ಇದರೊಂದಿಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು 17,129 ಲಕ್ಷ ರೂ. ಪೈಕಿ 8,322 ಲಕ್ಷ ರೂ. ಖರ್ಚು ಮಾಡಿ ಶೇ.49ರಷ್ಟು ಸಾಧನೆ ತೋರಿದೆ. 3,58,496 ಲಕ್ಷ ರೂ. ಪೈಕಿ 1,38,410 ಲಕ್ಷ ರೂ. ಖರ್ಚು ಮಾಡಿರುವ ವಸತಿ ಇಲಾಖೆಯು ಶೇ.39ರಷ್ಟು ಮಾತ್ರ ಪ್ರಗತಿ ಪ್ರದರ್ಶಿಸಿದೆ. ಉನ್ನತ ಶಿಕ್ಷಣ ಇಲಾಖೆಯು 5,52,612 ಲಕ್ಷ ರೂ. ಪೈಕಿ 2,52729 ಲಕ್ಷ ರೂ. ಖರ್ಚು ಮಾಡಿ ಶೇ.46ರಷ್ಟು ಮಾತ್ರ ಸಾಧಿಸಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯು 35,602 ಲಕ್ಷ ರೂ. ಪೈಕಿ 6,333 ಲಕ್ಷ ರೂ. ಖರ್ಚು ಮಾಡಿ ಶೆ.18ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದರೆ ಭಾರೀ ಮತ್ತು ಮಧ್ಯಮ ಕೈಗಾರಿಕೆ ಇಲಾಖೆಯು 1,17,042 ಲಕ್ಷ ರೂ. ಪೈಕಿ 38,791 ಲಕ್ಷ ರೂ. ಖರ್ಚು ಮಾಡಿ ಶೇ.33ರಷ್ಟು ಮಾತ್ರ ಸಾಧನೆ ತೋರಿದೆ. ಸಣ್ಣ ಕೈಗಾರಿಕೆಯು 52,223 ಲಕ್ಷ ರೂ. ಪೈಕಿ 23,388 ಲಕ್ಷ ರೂ. ಖರ್ಚು ಮಾಡಿ ಶೇ.45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಗಣಿ ಇಲಾಖೆಯು 6,921 ಲಕ್ಷ ರೂ. ಪೈಕಿ 2,815 ಲಕ್ಷ ರೂ. ಖರ್ಚು ಮಾಡಿ ಶೇ.41ರಷ್ಟು, ನಗರಾಭಿವೃದ್ಧಿ ಇಲಾಖೆಯು 14,39,895 ಲಕ್ಷ ರೂ. ವೆಚ್ಚ ಮಾಡಿ ಶೇ.42ರಷ್ಟು ಮಾತ್ರ ಪ್ರಗತಿ ಸಾಧಿಸಿದೆ ಎಂದು ತಿಳಿಸಲಾಗಿದೆ.

ಇನ್ನು ಲೋಕೋಪಯೋಗಿ ಇಲಾಖೆಯು 9,62,369 ಲಕ್ಷ ರೂ. ಪೈಕಿ 4,57,887 ಲಕ್ಷ ರೂ. ಖರ್ಚು ಮಾಡಿ ಶೇ.48ರಷ್ಟು ಭಾರೀ ನೀರಾವರಿ ಇಲಾಖೆಯು 18,01,900 ಲಕ್ಷ ರೂ. ಪೈಕಿ 7,59,943 ಲಕ್ಷ ರೂ. ಖರ್ಚು ಮಾಡಿ ಶೇ. 42ರಷ್ಟು, ವೈದ್ಯಕೀಯ ಶಿಕ್ಷಣ ಇಲಾಖೆಯು 4,40,457 ಲಕ್ಷ ರೂ. ಪೈಕಿ 1,92,521 ಲಕ್ಷ ರೂ. ಖರ್ಚು ಮಾಡಿ ಶೇ.44ರಷ್ಟು , ಆರೋಗ್ಯ ಇಲಾಖೆಯು 9,47,174 ಲಕ್ಷ ರೂ. ಪೈಕಿ 4,23,062 ಲಕ್ಷ ರೂ. ವೆಚ್ಚ ಮಾಡಿ ಶೇ.45ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಕಾರ್ಮಿಕ ಇಲಾಖೆಯು 65,237 ಲಕ್ಷ ರೂ. ಪೈಕಿ 26,200 ಲಕ್ಷ ರೂ. ವೆಚ್ಚ ಮಾಡಿ ಶೇ. 40ರಷ್ಟು ಮಾತ್ರ ಪ್ರಗತಿ ಹೊಂದಿದ್ದರೇ ಕೌಶಲ್ಯ ಅಭಿವೃದ್ಧ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು 1,18,190 ಲಕ್ಷ ರೂ.ಯಲ್ಲಿ 56,088 ಲಕ್ಷ ರೂ. ಖರ್ಚು ಮಾಡಿ ಶೇ.47ರಷ್ಟು, ಇಂಧನ ಇಲಾಖೆಯು 12,65,493 ಲಕ್ಷ ರೂ. ಪೈಕಿ 5,39,999 ಲಕ್ಷ ರೂ. ಖರ್ಚು ಮಾಡಿ ಶೇ. 43ರಷ್ಟು ಸಾಧನೆ ತೋರಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 23,351 ಲಕ್ಷ ರೂ. ಪೈಕಿ 8,186 ಲಕ್ಷ ರೂ. ಖರ್ಚು ಮಾಡಿ ಶೇ.35, ಯೋಜನೆ, ಸಾಂಖ್ಯಿಕ ಇಲಾಖೆಯು 3,80,632 ಲಕ್ಷ ರೂ. ಪೈಕಿ 1,14,344 ಲಕ್ಷ ರೂ. ಖರ್ಚು ಮಾಡಿ ಶೇ. 30ರಷ್ಟು, ಋಣ ಮೇಲುಸ್ತುವಾರಿ ಇಲಾಖೆಯು 45,57,331 ಲಕ್ಷ ರೂ. ಪೈಕಿ 21,64,434 ಲಕ್ಷ ರೂ. ಖರ್ಚು ಮಾಡಿ ಶೇ 47ರಷ್ಟು ಪ್ರಗತಿ ತೋರಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಅವರು ಮಾತನಾಡಿ, ಶೇ.40ರಷ್ಟು ಕಮಿಷನ್‍ಗೆ ಅವಕಾಶವಿದೆಯೋ ಆ ಯೋಜನೆಗಳು ಮಾತ್ರ ಚಾಲನೆಗೊಂಡಿರುವುದು ಕಂಡು ಬಂದಿರುತ್ತದೆ. ಕಮಿಷನ್ ವ್ಯವಹಾರಗಳಿಗೆ ಮತ್ತು ಅಕ್ರಮಗಳಿಗೆ ಆಸ್ಪದವಿಲ್ಲದಂತಹ ಫಲಾನುಭವಿಗಳಿಗೆ ನೇರವಾಗಿ ತಲುಪುವಂತಹ ಜನಕಲ್ಯಾಣ, ಸಾಮಾಜಿಕ ಭದ್ರತಾ ಯೋಜನೆಗಳು ಘೋಷಣೆಯಾಗಿದ್ದರೂ ಇನ್ನೂ ಅವುಗಳ ಆರಂಭಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ. ಇದೊಂದು ಚಿತ್ತ ಶುದ್ಧಿಯಿಲ್ಲದ ಪರಮ ಭ್ರಷ್ಟ ಸರಕಾರ. ಮುಖ್ಯಮಂತ್ರಿಯೂ ಸೇರಿದಂತೆ ಯಾವ ಮಂತ್ರಿಗಳಿಗೂ ಹಣ ಬಾರದ ಯಾವ ಯೋಜನೆಗಳ ಬಗ್ಗೆಯೂ ಆಸಕ್ತಿ ಇಲ್ಲ ಮತ್ತು ಆಡಳಿತ ಮತ್ತು ಜನಹಿತದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!