“ನಂಬಿಕೆ ಇರಲಿ, ಮೂಢನಂಬಿಕೆ ಬೇಡ”: ನಟ ಕಿಶೋರ್
ಬೆಂಗಳೂರು, ಜ.2: ”ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿಕೆ ಇರಲಿ, ಮೂಢನಂಬಿಕೆ ಬೇಡ” ಎಂದು ನಟ ಕಿಶೋರ್ ಅವರು ಹೇಳಿದ್ದಾರೆ.
`ಕಾಂತಾರ’ ದೈವ ಅವಮಾನಿಸಿದ ಯುವಕನೋರ್ವ ರಕ್ತಕಾರಿ ಸಾವನ್ನಪ್ಪಿದ್ದಾನೆ ಎನ್ನಲಾದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಬಗ್ಗೆ ಇನ್ಸ್ಟಾ ಗ್ರಾಂ ನಲಿ ಪೋಸ್ಟ್ ವೊಂದನ್ನು ಹಂಚಿಕೊಂಡು ಪ್ರತಿಕ್ರಿಯೆ ನೀಡಿರುವ ಕಾಂತಾರ ಸಿನೆಮಾದ ನಟ ಕಿಶೋರ್ ಅವರು, “ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ? ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೋ ವಾಟ್ಸ್ ಆ್ಯಪ್ ನಲ್ಲಿ ವೈರಲ್ ಆಗಿದೆ. ಆ ಸಿನೆಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೋ, ದೆವ್ವವೋ ಒಂದು ಸಾಧನವಷ್ಟೆ. ಸಿನೆಮಾವಾಗಲಿ ಪುರಾಣವಾಗಲಿ” ಎಂದು ತಿಳಿಸಿದ್ದಾರೆ.
ಹಾಗೂ “ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಬೇಡ” ಎಂದು ಅವರು ಬರೆದುಕೊಂಡಿದ್ದಾರೆ.