ಬಾಲ ಕಾರ್ಮಿಕ ಹಾಗೂ ಭಿಕ್ಷಾಟನೆ ತಡೆ ಸಮಿತಿಗೆ ಕಾರ್ಯಾಗಾರ

ಬೆಂಗಳೂರು: ಮಕ್ಕಳು ಭಿಕ್ಷಾಟನೆ ಹಾಗೂ ಮಾರುಕಟ್ಟೆ ವ್ಯಾಪಾರಗಳಲ್ಲಿ ಕೆಲಸ ಮಾಡುವುದನ್ನು ತಡೆಯುವ ಕುರಿತು ನಗರ ಕಾರ್ಯಪಡೆ ಸಮಿತಿಯ ಸದಸ್ಯರಿಗಾಗಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಹೈಕೋರ್ಟ್ ನ್ಯಾ. ವಿ.ಶ್ರೀಶಾನಂದ ಅವರು, ಭಿಕ್ಷೆ ಬೇಡುತ್ತಿರುವ, ಶಾಲೆಗಳಿಂದ ಹೊರಗುಳಿದ, ಮಾರುಕಟ್ಟೆಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು ಸೂಕ್ತವಾಗಿ ಶಿಕ್ಷಣ ಪಡೆಯುತ್ತಿದ್ದಾರೆಯೇ ಎನ್ನುವ ಬಗ್ಗೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದರು.

“ವಿದ್ಯಾಭ್ಯಾಸ ಮಾಡಬೇಕಾದ ಮಕ್ಕಳು ಭಿಕ್ಷಾಟನೆಯಲ್ಲಿ ಏಕೆ ತೊಡಗಿದ್ದಾರೆ ಎಂಬ ವಿಚಾರದ ಬಗ್ಗೆ ನಾವು ಚಿಂತನೆ ಮಾಡಬೇಕಿದೆ ಎಂದ ಅವರು, ಈ ಬಗ್ಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಿಸ್ವಾರ್ಥ ಭಾವದಿಂದ ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಲಯವಾರು ತಂಡಗಳನ್ನು ರಚನೆ ಮಾಡಿ ಸಮೀಕ್ಷೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಬಳಿಕ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಅವರು, “ಮಕ್ಕಳು ಭಿಕ್ಷಾಟನೆ ಮಾಡಲು ಕಾರಣವೇನು? ಅವರ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸಮೀಕ್ಷೆ ನಡೆಸುವ ಸಂದರ್ಭ ಮಕ್ಕಳೊಂದಿಗೆ ಸಂಯಮ ದಿಂದ ವರ್ತಿಸಿ ಮಾಹಿತಿ ಕಲೆಹಾಕಬೇಕು” ಎಂದು ಸಲಹೆ ನೀಡಿ, “ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಶಾಲೆ ಎನ್ನುವ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇದಕ್ಕಾಗಿ ಬಸ್‌ಗಳನ್ನೇ ಶಾಲೆಗಳನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸಕ್ಕಾಗಿ ಉಪಯೋಗಿಸಲಾಗುತ್ತದೆ. ಈ ಬಗ್ಗೆ ಈಗಾಗಲೇ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದು, ಇದಕ್ಕಾಗಿ ಪಾಲಿಕೆಯು ಬಿಎಂಟಿಸಿಯಿಂದ ಹತ್ತು ಬಸ್‌ಗಳನ್ನು ಪಡೆದುಕೊಂಡಿದೆ” ಎಂದು ತಿಳಿಸಿದರು.

“ಶಿಕ್ಷಕರು ಹಾಗೂ ಚಾಲಕರನ್ನು ಪಾಲಿಕೆಯ ವತಿಯಿಂದಲೇ ನೇಮಕ ಮಾಡಲಾಗುತ್ತದೆ. ಅಧಿಕ ಮಕ್ಕಳಿರುವ ಕೊಳಗೇರಿ ಪ್ರದೇಶಗಳನ್ನು ಗುರುತಿಸಿ ಅಲ್ಲಿಗೆ ಬಸ್‌ಗಳನ್ನು ಕಳುಹಿಸಲಾಗುತ್ತದೆ. ಅಲ್ಲದೇ, ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕೂಡಾ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!