ಹಗಲಲ್ಲಿ ಉರಿಯುವ ಬೀದಿ ದೀಪಗಳಿಂದ ಪ್ರತಿ ನಿತ್ಯ 50-60 ಕೋಟಿ ನಷ್ಟ
ಬೆಂಗಳೂರು ಡಿ.31 : ಗ್ರಾಮೀಣ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯುವುದರಿಂದ ದಿನಕ್ಕೆ 50 ಕೋಟಿಯಿಂದ 60 ಕೋಟಿಯಷ್ಟು ನಷ್ಟವಾಗುತ್ತಿದೆ ಎಂದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಹೇಳಿದೆ.
ಈ ವಿಚಾರವಾಗಿ ಶಿಫಾರಸ್ಸು ಮಾಡಿರುವ ಸಮಿತಿಯು, ರಾಜ್ಯದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿ ನಿತ್ಯ 12 ರಿಂದ 14 ಗಂಟೆಗಳಷ್ಟು ವಿದ್ಯುತ್ ನಷ್ಟವಾಗುತ್ತಿದ್ದು, ವಿದ್ಯುತ್ ಕಳವಿಗಿಂತ ಇಲಾಖೆಯ ನಿರ್ಲಕ್ಷ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಲಾಗುತ್ತಿದೆ. ಇದನ್ನು ತಡೆಯಲು ಒಂದೋ ಟೈಮರ್ ಅಳವಡಿಸಬೇಕು ಅಥವಾ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದೆ.
ಗ್ರಾಮೀಣ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಬೀದಿ ದೀಪಗಳು ಉರಿಯುವುದರಿಂದ ದಿನಕ್ಕೆ 50 ಕೋಟಿಯಿಂದ 60 ಕೋಟಿಯಷ್ಟು ನಷ್ಟವಾಗುತ್ತಿದೆ. ಇಂಧನ ಇಲಾಖೆಯು ಹೊಸ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದರೂ ವಿದ್ಯುತ್ ನಷ್ಟ ಆಗುತ್ತಿದೆ ಎಂದು ಗ್ರಾಮ ಪಂಚಾಯಿತಿಗಳ ಮೇಲೆ ಹೊರೆ ಹಾಕ ಲಾಗುತ್ತಿರುವುದು ಸರಿಯಲ್ಲ. ಗ್ರಾಮ ಪಂಚಾಯಿತಿ ಗಳಲ್ಲಿ ಸಂಬಳ ಕೊಡುವುದಕ್ಕೂ ಹಣವಿರುವುದಿಲ್ಲ, ಅವರು ಎಲ್ಲಿಂದ ತಂದು ಹಣ ಕಟ್ಟಬೇಕು? ಎಂದು ಪ್ರಶ್ನಿಸಿದೆ. ಹಾಗೂ ‘ನಿರಂತರ ಜ್ಯೋತಿ’ ವಿಚಾರದಲ್ಲಿ ಹೆಚ್ಚು ಕಡಿಮೆ ಯಾದರೆ, ಲೈನ್ ಕಟ್ ಮಾಡುತ್ತಾರೆ. ಇದರಿಂದ ಇಡೀ ರಾಜ್ಯದಲ್ಲಿ ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆ ಆಗಿದೆ ಎಂದೂ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಎಸ್ಕಾಂಗಳದ್ದು, ಬೀದಿ ದೀಪಗಳಿಗೆ ಪೂರಕವಾಗಿ ವಿದ್ಯುತ್ ತಂತಿ ಅಳವಡಿಸಿದ ಮೇಲೆ ಬೀದಿ ದೀಪ ಆನ್ ಮಾಡುವ ಮತ್ತು ಆಫ್ ಮಾಡುವ ಜವಾಬ್ದಾರಿಯೂ ಎಸ್ಕಾಂಗಳದ್ದೇ. ತನ್ನ ಜವಾಬ್ದಾರಿಯನ್ನು ನಿರ್ವಹಿಸದೇ ಇದ್ದರೆ ಹೇಗೆ? ಮೊದಲು ಇದ್ದ ವಿದ್ಯುತ್ ತಂತಿಗಳನ್ನು ತೆಗೆದು ಹಾಕಿ ನಿರಂತರ ಜ್ಯೋತಿಯಡಿ ತಂತಿಗಳನ್ನು ಅಳವಡಿಸಲಾಗಿದೆ ಇದರ ನಿಯಂತ್ರಣಕ್ಕೆ ಸ್ವಿಚ್ಗಳು ಇರುವುದಿಲ್ಲ. ಆದರೆ ಬಿಲ್ ಮಾತ್ರ ನಿರಂತರವಾಗಿ ಗ್ರಾಮ ಪಂಚಾಯಿತಿಗಳಿಗೆ ಬರುತ್ತವೆ. ತಾಂತ್ರಿಕ ಕೆಲಸಗಳನ್ನು ಗ್ರಾಮ ಪಂಚಾಯಿತಿಗಳು ನಿರ್ವಹಿಸಲು ಆಗುವುದಿಲ್ಲ ಎಂದು ಸಮಿತಿಯು ಇಂಧನ ಇಲಾಖೆಗೆ ಕಟ್ಟುನಿಟ್ಟಾಗಿ ಹೇಳಿದೆ. ಹಾಗೂ ಬೀದಿ ದೀಪಗಳಿಗೆ ಪ್ರತ್ಯೇಕ ಫೀಡರ್ ಹಾಕಬೇಕಾಗುತ್ತದೆ. ಇದನ್ನು ಗ್ರಾಮ ಪಂಚಾಯಿತಿಯವರು ಮಾಡಬೇಕು. ಇಲ್ಲವಾದರೆ ಇದಕ್ಕೆ ಅನುದಾನ ಕೊಟ್ಟಾಗ ಇಲಾಖೆಯು ಮಾಡಬೇಕಾಗುತ್ತದೆ ಎಂದು ಇಂಧನ ಇಲಾಖೆಯು ಸಮಜಾಯಿಷಿ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಸಮಿತಿಯು, ಗ್ರಾಹಕರಿಗೆ ವಿತರಣೆ ಮಾಡಲು ಲೈನ್ ಹಾಕುವ ಸಂದರ್ಭದಲ್ಲಿ ಬೀದಿ ದೀಪದ ಲೈನ್ ಸೇರಿಸಿದರೆ ಸೂಕ್ತ. ಇದಕ್ಕಾಗಿ ಲೈನ್ಗೆ ತಗಲುವ ವೆಚ್ಚದ ಅಂದಾಜು ಮಾಡಿ ಕೊಡುವುದು ಇಲಾಖೆ ಕರ್ತವ್ಯ. ಸಮಗ್ರ ಯೋಜನಾ ವರದಿ ತಯಾರಿಸುವ ಸಂದರ್ಭದಲ್ಲಿ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸಮಿತಿ ತಾಕೀತು ಮಾಡಿದೆ.
ಇದರ ಜೊತೆಗೆ ರಾಜ್ಯದಲ್ಲಿ ಎಲ್ಲಾ ಕಡೆಗಳಲ್ಲಿ ಲೈನ್ಮನ್ಗಳ ಕೊರತೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಲೈನ್ಮನ್ಗಳ ನೇಮಕಕ್ಕೆ ಆದ್ಯತೆ ನೀಡಬೇಕು ಎಂದು ಸಮಿತಿ ಸೂಚಿಸಿದೆ. ಇಂಧನ ಇಲಾಖೆಯು ಉತ್ತಮ ಸೇವೆ ಸಲ್ಲಿಸಲು ಶೇ.80 ರಷ್ಟು ಸಿಬ್ಬಂದಿ ಕಾಯಂ ಆಗಿ ಇರುವಂತೆ ಕ್ರಮ ತೆಗೆದುಕೊಳ್ಳಬೇಕು. ಅವಶ್ಯ ಇರುವ ಎಂಜಿನಿಯರ್ ಹುದ್ದೆಗಳಿಗೆ ಸ್ಥಳೀಯವಾಗಿ ಲಭ್ಯವಾಗುವ ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದ ಮೇಲೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು. ಹೊರಗುತ್ತಿಗೆ ಸಿಬ್ಬಂದಿಗೆ ವೇತನವನ್ನು ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿ ಮಾಡಿದರೆ ಏಜೆನ್ಸಿಗಳ ಕಿರುಕುಳ ತಪ್ಪುತ್ತದೆ ಎಂದೂ ಸಲಹೆ ನೀಡಿದೆ.