ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ
ಬೆಂಗಳೂರು: ಇತ್ತೀಚಿಗೆ ಉಪಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರು ನಿಧನರಾದ ಹಿನ್ನೆಲೆಯಲ್ಲಿ ತೆರವಾಗಿದ್ದ ರಾಜ್ಯ ವಿಧಾನಪರಿಷತ್ನ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜ.29 ರಂದು ಚುನಾವಣೆ ನಡೆಸಲು ಸಭಾಪತಿ ದಿನಾಂಕವನ್ನು ಗೊತ್ತುಪಡಿಸಿದ್ದಾರೆ ಎಂದು ವಿಧಾನಪರಿಷತ್ನ ಸಚಿವಾಲಯ ತಿಳಿಸಿದೆ.
ಜ.29ರಂದು ಚುನಾವಣೆ ನಡೆಯುವ ಹಿನ್ನೆಲೆ, ಜ.28ರ ಮಧ್ಯಾಹ್ನ 3 ಗಂಟೆಯೊಳಗೆ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯ ಹೆಸರನ್ನು ಸೂಚಿಸಬೇಕಾಗಿದೆ. ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧೆ ಮಾಡುವ ಸದಸ್ಯರ ಹೆಸರನ್ನು ವಿಧಾನಪರಿಷತ್ನ ಕಾರ್ಯದರ್ಶಿ ಅವರಿಗೆ ಲಿಖಿತವಾಗಿ ಸೂಚಿಸಬೇಕಾಗಿದ್ದು, ಅಭ್ಯರ್ಥಿಯು ತಮ್ಮ ಹೆಸರನ್ನು ಸೂಚಿಸುವುದರೊಂದಿಗೆ ಅಥವಾ ಅನುಮೋದಕರೊಂದಿಗೆ ಖುದ್ದಾಗಿ ಸಲ್ಲಿಸಬೇಕಾಗಿದೆ.
ಇನ್ನೂ ಸ್ಪರ್ಧೆ ಮಾಡುವ ಅಭ್ಯರ್ಥಿಯ ಸೂಚನೆಯು ಮೂರನೇ ಸದಸ್ಯರಿಂದ ಅನುಮೋದಿಸಬೇಕಾಗಿದ್ದು, ಯಾವ ಸದಸ್ಯರ ಹೆಸರು ಸೂಚಿತವಾಗಿದೆಯೋ ಅವರು ಚುನಾಯಿತರಾದಲ್ಲಿ ಉಪಸಭಾಪತಿಯಾಗಿ ಸೇವೆ ಸಲ್ಲಿಸಲು ಒಪ್ಪಿರುವ ಹೇಳಿಕೆಯನ್ನು ಸೂಚನೆಯೊಂದಿಗೆ ಲಗತ್ತಿಸಬೇಕು. ಆದರೆ ಯಾವೊಬ್ಬ ಸದಸ್ಯನು ತನ್ನ ಹೆಸರನ್ನು ತಾನೇ ಸೂಚಿಸಿಕೊಳ್ಳುವಂತಿಲ್ಲ. ಹಾಗೆಯೇ ತನ್ನ ಹೆಸರನ್ನು ಸೂಚಿಸುವ ಯಾವುದೇ ಪ್ರಸ್ತಾವವನ್ನು ಅನುಮೋದಿಸುವಂತಿಲ್ಲ. ಇದರೊಂದಿಗೆ ಒಂದಕ್ಕಿಂತ ಹೆಚ್ಚು ಪ್ರಸ್ತಾವವನ್ನು ಸೂಚಿಸುವ ಮತ್ತು ಅನುಮೋದಿಸುವಂತೆಯೂ ಇಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.