ಗೋಡ್ಸೆಯನ್ನು ಆರಾಧಿಸುವವರು ದೇಶದ್ರೋಹಿಗಳು: ಯು.ಟಿ.ಖಾದರ್
ಬೆಳಗಾವಿ ಡಿ.27: ಸಂವಿಧಾನವನ್ನು ಒಪ್ಪದವರು, ಗೋಡ್ಸೆಯನ್ನು ಆರಾಧಿಸುವವರು ದೇಶದ್ರೋಹಿಗಳು ಎಂದು ವಿಧಾನಸಭೆಯ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ನಿನ್ನೆ ಮಾತನಾಡಿದ ಅವರು, ಭಾರತದ ಗಡಿಯಲ್ಲಿ ಚೆಕ್ಪೋಸ್ಟ್ಗಳು, ಭದ್ರತೆ, ಗುಪ್ತಚರ ಎಲ್ಲ ಇದ್ದರೂ 200 ಕೆ.ಜಿ. ಸ್ಫೋಟಕ ಆರ್ಡಿಎಕ್ಸ್ ಹೇಗೆ ಬಂತು ಎನ್ನುವುದು ಈವರೆಗೂ ದೇಶದ ಜನತೆಗೆ ಗೊತ್ತಾಗಿಲ್ಲ. ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡಿದ ಮೆಹಬೂಬ ಮುಫ್ತಿ ಜೊತೆ ಕಾಶ್ಮೀರದಲ್ಲಿ ಸರಕಾರ ಮಾಡಿದವರು, ತಮ್ಮನ್ನು ದೇಶಪ್ರೇಮಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂಜೋತಾ ಎಕ್ಸ್ಪ್ರೆಸ್, ಮಕ್ಕಾ ಮಸೀದಿ, ಮಾಲೆಗಾಂವ್ ಸ್ಫೋಟ ಪ್ರಕರಣ ನಮ್ಮ ಮುಂದಿವೆ. ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಗೆ ಟಿಕೆಟ್ ಕೊಟ್ಟು ಸಂಸದರನ್ನಾಗಿ ಮಾಡಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಭಯೋತ್ಪಾದಕರನ್ನು ಯಾವುದೇ ಧರ್ಮದ ಆಧಾರದಲ್ಲಿ ಕಾಣಬಾರದು. ಭಯೋತ್ಪಾದಕ ಕೃತ್ಯ ನಮ್ಮವರು ಮಾಡಿದರೆ ಸರಿ, ಬೇರೆಯವರು ಮಾಡಿದರೆ ತಪ್ಪು ಎಂಬ ಮನಸ್ಥಿಯೇ ಆತಂಕಕಾರಿ. ಕಂದಹಾರ್ಗೆ ಮೂವರು ಭಯೋತ್ಪಾದಕರನ್ನು ವಿಮಾನದಲ್ಲಿ ಕೇಂದ್ರ ಸಚಿವರೊಬ್ಬರು ಹೋಗಿ ಬಿಟ್ಟು ಬಂದಿದ್ದು ನಮ್ಮ ಕಣ್ಣ ಮುಂದಿದೆ. ನಂತರ ಅವರಿಂದಾಗಿಯೇ ಸಂಸತ್ನ ಮೇಲೆ ದಾಳಿ, ಮುಂಬಯಿ ಮೇಲಿನ ದಾಳಿ, ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲಿನ ದಾಳಿ ನಡೆದದ್ದು ಗೊತ್ತಿದೆ ಎಂದರು.
ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸಿದ್ದ ವ್ಯಕ್ತಿ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದರೆ ಸರಕಾರಕ್ಕೆ, ಪೊಲೀಸರಿಗೆ ಮಾಹಿತಿಯೇ ಇಲ್ಲ. ಅದೃಷ್ಟವಶಾತ್ ಆ ಕುಕ್ಕರ್ ರಿಕ್ಷಾದಲ್ಲಿ ಸ್ಫೋಟಗೊಂಡಿತು. ಒಂದು ವೇಳೆ ರೈಲ್ವೆ ನಿಲ್ದಾಣದಲ್ಲಿ ಆಗಿದ್ದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಆದುದರಿಂದ, ನಾವೆಲ್ಲರೂ ಒಂದಾಗಿ ದೇಶ, ಸಮಾಜ ವನ್ನು ಕಾಪಾಡುವ ಕೆಲಸಕ್ಕೆ ಕೈ ಜೋಡಿಸಬೇಕು. ಯಾವುದೇ ಧರ್ಮ ಮತ್ತೊಂದು ಧರ್ಮಕ್ಕೆ ಅಪಚಾರ ಮಾಡಲು ಪ್ರೇರೇಪಿಸುವುದಿಲ್ಲ. ಎಲ್ಲ ಧರ್ಮಗಳು, ಧರ್ಮ ಗ್ರಂಥಗಳು ಮಾನವ ಒಳಿತಿಗಾಗಿಯೆ ಇದೆ ಎಂದರು.