ಬೈಂದೂರು: ಫಿಶ್‌ವೇಫರ್ಸ್ & ಖಾದ್ಯ ತಯಾರಿಕಾ ಘಟಕಕ್ಕೆ ಶಂಕುಸ್ಥಾಪನೆ

ಬೈಂದೂರು (ಉಡುಪಿ ಟೈಮ್ಸ್ ವರದಿ): ಮತ್ಸ್ಯ ಬಂಧನ ಪ್ರೈವೆಟ್ ಲಿಮಿಟೆಡ್ ವತಿಯಿಂದ ನಿರ್ಮಾಣವಾಗಲಿರುವ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪಾದನಾ ಘಟಕದ ಶಿಲನ್ಯಾಸ ಕಾರ್ಯಕ್ರಮ ಜ. 19 ರಂದು  ಬೈಂದೂರು ತಾಲೂಕು ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ನಡೆಯಿತು. ಈ ನೂತನ ಘಟಕಕ್ಕೆ  ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಮೀನುಗಾರಿಕೆಗೆ ಸಹಕಾರಿಯಾಗುವ ಉದ್ಯಮ ಈ ಭಾಗಕ್ಕೆ ಅಗತ್ಯವಾಗಿದೆ.  ಗೋವಿಂದ ಬಾಬು ಪೂಜಾರಿಯವರಲ್ಲಿನ ಪರಿಶ್ರಮ, ಶೃದ್ದೆಯು ಅವರನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದೆ. ಬಲಿತ ಮೀನುಗಳನ್ನು ಬಳಸಿಕೊಂಡು, ಮೀನುಗಾರಿಕೆಗೆ ಆಶ್ರಯವಾಗುವ ಈ ಉದ್ಯಮ ಯಶಸ್ವಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.  ಈ ಬಗ್ಗೆ ಮಾತು ಮುಂದುವರೆಸಿದ ಅವರು, ಮತ್ಸ್ಯ ಬಂಧನ ಮೀನಿನ ಮೌಲ್ಯವರ್ಧಿತ ಖಾದ್ಯಗಳನ್ನು ರಾಜ್ಯದ ಮುಖ್ಯಮಂತ್ರಿಗಳು ಜೂನ್‌ನಲ್ಲಿಯೇ ಬಿಡುಗಡೆಗೊಳಿಸಿದ್ದಾರೆ.

ಮೀನಿನ ಖಾದ್ಯಗಳ ಮಾರುಕಟ್ಟೆ ವ್ಯವಸ್ಥೆಗೆ ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಿಕೊಂಡರೆ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ಈ ಬಗ್ಗೆ ಪ್ರಯತ್ನ ನಡೆಯುತ್ತಿದೆ ಎಂದರು. ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ಅವಿಭಜಿತ ದ.ಕ ಜಿಲ್ಲೆಯ ಜನರು ಬುದ್ಧಿವಂತರು, ಸ್ವಾಭಿಮಾನಿಗಳು.

ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ಭಾಗದಲ್ಲಿ ಮತ್ಸ ಸಂಪತ್ತನ್ನು ಬಳಸಿಕೊಂಡು ಮೌಲ್ಯವರ್ಧಿತ ಉತ್ಪನ್ನವಾಗಿಸುವ ನಿಟ್ಟಿನಲ್ಲಿ ಮತ್ಸ್ಯ ಬಂಧನ ಸಂಸ್ಥೆಯ ಮೂಲಕ ಮುಂದಾಗಿರುವುದು ಸ್ವಾಗತಾರ್ಹ. ಹಿಂದುಳಿದಿರುವ ಬೈಂದೂರು ಭಾಗದ ಪ್ರದೇಶಗಳಿಗೆ ಇಂತಹ ಉದ್ಯಮಗಳ ಅಗತ್ಯವಿದೆ. ಇದರಿಂದ ಮೀನುಗಾರಿಕೆಗೂ ಅನುಕೂಲವಾಗುವುದರ ಜೊತೆಗೆ ನಿರುದ್ಯೋಗ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಪ್ರತೀ ಮನೆಗೂ ಶುದ್ಧ ಕುಡಿಯುವ ನೀರು ಕೊಡುವ ಕಾರ್ಯವಾಗುತ್ತಿದೆ.

ಕೊಲ್ಲೂರಿನಿಂದ ಕೊಡಚಾದ್ರಿಗೆ ರೋಪ್ ವೇ ನನ್ನ ಕನಸಾಗಿದ್ದು, ಶೀಘ್ರ ಅನುಷ್ಠಾನವಾಗಲಿದೆ ಎಂದು ಸಂಸದರು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಮಾತನಾಡಿ, ಇವತ್ತು ಸಾಕಷ್ಟು ಮಂದಿ ಕರೋನಾ ಕಾರಣದಿಂದ ಉದ್ಯೋಗ ಕಳೆದು ಊರಿಗೆ ಮರಳಿದ್ದಾರೆ. ಇಲ್ಲಿ ಉದ್ಯಮ ಸ್ಥಾಪನೆಯಾಗುವುದರಿಂದ ಅವರಿಗೆ ಇಲ್ಲಿ ಉದ್ಯೋಗ ದೊರಕಿಸಿಕೊಡುವುದರ ಜೊತೆಗೆ ಕೃಷಿ ಮಾಡಲುಸಹಾಯವಾಗುತ್ತದೆ. ಮೀನಿನ ಮೌಲ್ಯವರ್ಧಿತ ಉತ್ಪನ್ನಗಳು, ಖಾದ್ಯಗಳು ಇವತ್ತಿನ ವೇಗದ ಯುಗಕ್ಕೆ ಅನುಕೂಲವಾಗುತ್ತದೆ ಎಂದರು.


ಇದೇ ವೇಳೆ ಸಂಸದ ಬಿ.ವೈ. ರಾಘವೇಂದ್ರ ಅವರು ಬಾಬು ಗೋವಿಂದ ಪೂಜಾರಿ ಅವರನ್ನು ಅಭಿನಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಮಿಮಿಕ್ರಿ ಕಲಾವಿದ ಸಂತೋಷ್ ಕುಂದೇಶ್ವರ ಅವರಿಂದ ಹಾಸ್ಯ ಕಾರ್ಯಕ್ರಮ, ಗಾಯಕಿ ಗೀತಾ ಪೂಜಾರಿ ಬೈಂದೂರು ಇವರಿಂದ ಸುಗಮ ಸಂಗೀತ ನಡೆಯಿತು. ಸಂಸ್ಥೆಯ ನಿರ್ದೇಶಕ ಅರುಣ್ ಧನಪಾಲ್ ಮೊದಲಾದವರು ಅತಿಥಿಗಳನ್ನು ಗೌರವಿಸಿದರು. ಬೈಂದೂರು ಕ್ಷೇತ್ರದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ  ಸಂದರ್ಭದಲ್ಲಿ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮನಾಥ ಕೋಟ್ಯಾನ್, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಎಂ.ಡಿ ಎಂ.ಎಲ್ ದೊಡ್ಮನಿ, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಜಿ.ಪಂ.ಸದಸ್ಯರುಗಳಾದ ಶಂಕರ ಪೂಜಾರಿ, ಗೌರಿ ದೇವಾಡಿಗ, ಗೀತಾಂಜಲಿ ಸುವರ್ಣ, ದ.ಕ-ಉಡುಪಿ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕುಂದಾಪುರ ತಾ.ಪಂ. ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾ.ಪಂ. ಸದಸ್ಯ ವಿಜಯ ಶೆಟ್ಟಿ, ಜ್ಯೋತಿಷಿ ರಘುನಾಥ ಜೋಯಿಸ್, ಉದ್ಯಮಿ ಕೆ. ವೆಂಕಟೇಶ್ ಕಿಣಿ, ಗೋಳಿಹೊಳೆ ಗ್ರಾ. ಪಂ. ಸದಸ್ಯ ವಸಂತ ಹೆಗ್ಡೆ, ಬಿಎಸ್‌ಎನ್‌ಡಿಪಿ ರಾಜ್ಯಾಧ್ಯಕ್ಷ ಸಾಯಿದತ್ತಿ ಗುತ್ತೆದಾರ್, ಉದ್ಯಮಿ ಗುರುರಾಜ ಪಂಜು ಪೂಜಾರಿ, ಮತ್ಸ್ಯ ಬಂಧನ ಪ್ರೈ.ಲಿಮಿಟೆಡ್ ಆಡಳಿತ ನಿರ್ದೇಶಕ ಗೋವಿಂದ ಬಾಬು ಪೂಜಾರಿ, ಪತ್ರಕರ್ತ ಅರುಣ್ ಕುಮಾರ್ ಶಿರೂರು, ಶಿಕ್ಷಕ ಸುಬ್ರಹ್ಮಣ್ಯ ಜಿ. ಉಪ್ಪುಂದ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!